ಪಬ್ ಪಾರ್ಟಿಯಲ್ಲಿ ಭಾಗಿಯಾದ 18 ಮಂದಿಯ ಗುರುತು ಪತ್ತೆ: ಪೊಲೀಸ್ ಆಯುಕ್ತ ಶಶಿಕುಮಾರ್
ಮಂಗಳೂರು,ಜು.26: ನಗರದ ಬಲ್ಮಠದಲ್ಲಿರುವ ‘ರಿ ಸೈಕಲ್ ದಿ ಲಾಂಜ್’ ಪಬ್ನಲ್ಲಿ ಸೋಮವಾರ ರಾತ್ರಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡ ಕಾಲೇಜೊಂದರ 30 ವಿದ್ಯಾರ್ಥಿಗಳ ಪೈಕಿ 18 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಗುರುತು ಪತ್ತೆಯಾದ 18 ಮಂದಿಯ ಪೈಕಿ 8 ಮಂದಿ 21 ವರ್ಷ ವಯಸ್ಸಿಗಿಂತ ಕೆಳಗಿನವರಾಗಿದ್ದಾರೆ. ಅಬಕಾರಿ ಕಾಯ್ದೆಯ ಪ್ರಕಾರ 21 ವರ್ಷ ವಯಸ್ಸಿನ ಕೆಳಗಿನವರಿಗೆ ಬಾರ್ಗಳಲ್ಲಿ ಅಮಲು ದ್ರವ್ಯಗಳನ್ನು ಪೂರೈಕೆ ಮಾಡುವಂತಿಲ್ಲ. ಹಾಗಾಗಿ 8 ಮಂದಿಗೆ ಅಮಲು ದ್ರವ್ಯಗಳನ್ನು ನೀಡಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಅಬಕಾರಿ ಇಲಾಖೆಯವರು ತನಿಖೆ ನಡೆಸಬೇಕಿದೆ. ಈ 8 ಮಂದಿ ವಿದ್ಯಾರ್ಥಿಗಳ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅವರ ತನಿಖಾ ವರದಿಯಲ್ಲಿ ಮದ್ಯ ಪೂರೈಸಿರುವುದು ಸಾಬೀತಾದರೆ ಪಬ್ನ್ನು 10 ದಿನದ ಮಟ್ಟಿಗೆ ಮುಚ್ಚುವ ಅಧಿಕಾರ ಪೊಲೀಸ್ ಇಲಾಖೆಗೆ ಇದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
Next Story