ಉಳ್ಳಾಲ: ಹಿಟ್ ಆ್ಯಂಡ್ ರನ್; ಸಂಚಾರಿ ಠಾಣೆ ಹೆಡ್ ಕಾನ್ಸ್ಟೇಬಲ್ ಗಂಭೀರ
ಉಳ್ಳಾಲ: ಗಸ್ತಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹೆಡ್ ಕಾನ್ಸ್ಟೇಬಲ್ ಗೆ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ಸೇರಿದ ಘಟನೆ ಉಳ್ಳಾಲ ಬೈಲಿನಲ್ಲಿ ನಡೆದಿದೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಲೋಕೇಶ್ ನಾಯ್ಕ್ ಗಂಭೀರವಾಗಿ ಗಾಯಗೊಂಡರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೋಕೇಶ್ ನಾಯ್ಕ್ ಮತ್ತು ಎಎಸ್ಐ ಮಂಜುಳ ಅವರು ಹೈ-ವೆ ಪೆಟ್ರೋಲ್ ವಾಹನದಲ್ಲಿ ರವಿವಾರ ಸಂಜೆ ಉಳ್ಳಾಲ ಬೈಲಲ್ಲಿ ಗಸ್ತಲ್ಲಿದ್ದ ವೇಳೆ ಘಟನೆ ನಡೆದಿದೆ.
ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ಧಾವಿಸುತ್ತಿದ್ದ ಸ್ವಿಫ್ಟ್ ಕಾರನ್ನ ಲೋಕೇಶ್ ಅವರು ತಪಾಸಣೆಗಾಗಿ ತಡೆದು ಬದಿಗೆ ನಿಲ್ಲುವಂತೆ ಸೂಚಿಸಿದ್ದರು. ಈ ವೇಳೆ ಕಾರು ಏಕಾ ಏಕಿ ಲೋಕೇಶ್ ಅವರಿಗೆ ಢಿಕ್ಕಿ ಹೊಡೆದು ಉಳ್ಳಾಲದ ಕಡೆಗೆ ಪರಾರಿಯಾಗಿದೆ.
ಢಿಕ್ಕಿ ಹೊಡೆದು ಪರಾರಿಯಾದ ಕಾರಿನ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು ಸಮೀಪದ ಸಿಸಿಟಿವಿಗಳನ್ನ ತಪಾಸಣೆ ನಡೆಸುತ್ತಿದ್ದಾರೆ.