ಶಾರ್ಜಾದಲ್ಲಿ ಭಾರತೀಯ ಮಹಿಳೆಯ ಕೊಲೆ
ಮಕ್ಕಳೊಂದಿಗೆ ಪತಿ ಭಾರತಕ್ಕೆ ಪರಾರಿ?
ಸಾಂದರ್ಭಿಕ ಚಿತ್ರ
ದುಬೈ, ಎ. 26: ಶಾರ್ಜಾದ ಮೇಸಲೂನ್ ಪ್ರದೇಶದಲ್ಲಿರುವ ಮನೆಯೊಂದರ ಕೋಣೆಯಲ್ಲಿ ಹೂತು ಹಾಕಲ್ಪಟ್ಟ ಭಾರತೀಯ ಮಹಿಳೆಯೋರ್ವರ ಕೊಳೆತ ದೇಹವನ್ನು ಪತ್ತೆಹಚ್ಚಲಾಗಿದೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
36 ವರ್ಷದ ಮಹಿಳೆಯ ಪತಿ ಆಕೆಯನ್ನು ಕೊಲೆ ಮಾಡಿ ಭಾರತಕ್ಕೆ ಪಲಾಯನಗೈದಿರಬಹುದು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.
ಹೆಂಡತಿಯನ್ನು ಕೊಲೆ ಮಾಡಿದ ಬಳಿಕ ಪತಿ ಆಕೆಯ ದೇಹವನ್ನು ಮನೆಯಲ್ಲಿ ಹೂತು ಇಬ್ಬರು ಮಕ್ಕಳೊಂದಿಗೆ ಭಾರತಕ್ಕೆ ಪಲಾಯನಗೈದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
‘ಬಾಡಿಗೆಗೆ ಕೊಡಲಾಗುವುದು’ ಎಂಬ ಫಲಕವನ್ನೂ ಬಾಗಿಲಿನಲ್ಲಿ ತೂಗು ಹಾಕಲಾಗಿತ್ತು.
ಭಾರತದಲ್ಲಿರುವ ಸಹೋದರನು ಮಹಿಳೆಯನ್ನು ಹುಡುಕುತ್ತಾ ಆ ಮನೆಗೆ ಬಂದಾಗ ವಿಷಯ ಹೊರಜಗತ್ತಿನ ಗಮನಕ್ಕೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿದ ಸಹೋದರ ಎಪ್ರಿಲ್ 19ರಂದು ಪೊಲೀಸರಿಗೆ ದೂರು ನೀಡಿದ್ದರು.
ಮಹಿಳೆಯು ತನ್ನ ಸಹೋದರನೊಂದಿಗೆ ಫೋನ್ನಲ್ಲಿ ಪ್ರತಿ ದಿನ ಮಾತನಾಡುತ್ತಿದ್ದರು. ಹಲವು ದಿನಗಳಿಂದ ಸಹೋದರಿಯ ಫೋನ್ ಮೌನವಾದ ಹಿನ್ನೆಲೆಯಲ್ಲಿ ಸಹೋದರ ಹುಡುಕುತ್ತಾ ಶಾರ್ಜಾಕ್ಕೆ ಬಂದಿದ್ದರು.
ತಪಾಸಣೆಯ ವೇಳೆ, ಕೋಣೆಯ ಛಾವಣಿಯ ಹಾಸುಗಳು ಕಾಣೆಯಾಗಿರುವುದನ್ನು ಪೊಲೀಸರು ಗಮನಿಸಿದರು. ಆಗ ಮಹಿಳೆಯ ಶವವನ್ನು ಹೂತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಇಬ್ಬರು ಪತ್ನಿ
ಆರೋಪಿ ಗಂಡನಿಗೆ ಇಬ್ಬರು ಪತ್ನಿಯರಿದ್ದರು ಎಂದು ಹೇಳಲಾಗಿದೆ. ಓರ್ವ ಹೆಂಡತಿಯನ್ನು ಕೊಲ್ಲುವ ಮುನ್ನ ಅವನು ತನ್ನ ಇನ್ನೊಬ್ಬ ಹೆಂಡತಿ ಮತ್ತು ಮಕ್ಕಳನ್ನು ಭಾರತಕ್ಕೆ ಕಳುಹಿಸಿದ್ದನು ಎನ್ನಲಾಗಿದೆ.
ಆರೋಪಿಯ ಬಂಧನಕ್ಕಾಗಿ ಇಂಟರ್ಪೋಲ್ ಮೂಲಕ ಬಂಧನ ವಾರಂಟ್ ಹೊರಡಿಸಲಾಗಿದೆ.