ಅಬುಧಾಬಿ ಲಾಟರಿಯಲ್ಲಿ 10 ಮಿಲಿಯನ್ ದಿರ್ಹಮ್ ಗೆದ್ದ ಭಾರತೀಯ
ಅಬುಧಾಬಿ,ಜು.3 : ಅಬುಧಾಬಿಯ ಬಿಗ್ ಟಿಕೆಟ್ ರ್ಯಾಫೆಲ್ ಡ್ರಾದಲ್ಲಿ ಭಾರತೀಯ ವ್ಯಕ್ತಿಯೊಬ್ಬರು 10 ಮಿಲಿಯನ್ ದಿರ್ಹಮ್ ಬಹುಮಾನ ಗೆದ್ದಿದ್ದಾರೆ.
ಶುಕ್ರವಾರ ಬೆಳಿಗ್ಗೆ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಡ್ರಾದಲ್ಲಿ ವಝಪ್ಪಲ್ಲಿಲ್ ಯೊಹನ್ನನ್ ಸೈಮನ್ ಎಂಬ ಈ ವ್ಯಕ್ತಿ ಈ ಹಣ ಗೆದ್ದಿದ್ದಾರೆ. ಸಂಘಟಕರು ಸೈಮನ್ ಗೆ ಅಭಿನಂದನೆ ಸಲ್ಲಿಸಲು ವೇದಿಕೆಗೆ ಆಹ್ವಾನಿಸಿದಾಗ ಆರಂಭದಲ್ಲಿ ಆತ ಇದೇನೋ ಸುಳ್ಳಿರಬೇಕು ಎಂದು ಅಂದುಕೊಂಡಿದ್ದರು. ನಂತರ ಸಂಘಟಕರು ಟಿಕೆಟ್ ಸಂಖ್ಯೆಯನ್ನು ಹೇಳಿದಾಗ ಅದು ನಿಜವೆಂದು ಗೊತ್ತಾಗಿ ಅವರು ಅತೀವ ಸಂತಸ ಪಟ್ಟಿದ್ದಾರೆ. ಈ ಲಾಟರಿಯನ್ನು ಅವರು ಆನ್ಲೈನ್ ಮೂಲಕ ಖರೀದಿಸಿದ್ದರು.
ಹತ್ತು ಮಂದಿ ವಿಜೇತರ ಪೈಕಿ ಒಬ್ಬ ಸಿರಿಯನ್ ಪ್ರಜೆ ಬಿಟ್ಟರೆ ಉಳಿದವರೆಲ್ಲರೂ ಭಾರತೀಯರಾಗಿದ್ದಾರೆ. ಫಿಲಿಪ್ಪೀನ್ಸ್ನ ಜೇಸನ್ ಬಲೋಲೊಯ್ ಅವರು ಲ್ಯಾಂಡ್ ರೋವರ್ ಗೆದ್ದಿದ್ದಾರೆ.
ಈ ರ್ಯಾಫೆಲ್ ಡ್ರಾ ವಿಜೇತರಾಗಿರುವ ಇತರ ಭಾರತೀಯರ ಹೆಸರುಗಳು ಇಂತಿವೆ- ಅನ್ವರ್ ಅಲಿಯಾರು ಕುಂಜು (1,00,000 ದಿರ್ಹಮ್), ಕಪ್ಪು ಎನ್ಎಸ್ ಭಟ್ (90,000 ದಿರ್ಹಮ್), ವಿಶಾಲ್ ವಾಡ್ಕರ್ (80,000 ದಿರ್ಹಮ್), ಬಿಜು ಚಿರಮೆಲ್ (50,000 ದಿರ್ಹಮ್), ಶೌಕತ್ ಶರೀಫ್ (30,000 ದಿರ್ಹಮ್), ರಾಕೇಶ್ ಮೆಲೆ ಕಲಾಂ (20,000 ದಿರ್ಹಮ್), ಶ್ರೀಜಿತ್ ಶ್ರೀರಾಮನ್ (10,000 ದಿರ್ಹಮ್) ಹಾಗೂ ಶಾಜಿ ಕುನ್ನನ್ನರಿ (10,000 ದಿರ್ಹಮ್).