ಸೌದಿ ಅರೇಬಿಯದಲ್ಲಿ ಅಮೆರಿಕ ಸೈನಿಕರ ಹೆಚ್ಚಳ: ರಕ್ಷಣಾ ಇಲಾಖೆ ಪೆಂಟಗನ್ ಘೋಷಣೆ
ವಾಶಿಂಗ್ಟನ್, ಅ. 12: ಅಮೆರಿಕವು ಸೌದಿ ಅರೇಬಿಯದಲ್ಲಿರುವ ತನ್ನ ಪಡೆಗಳನ್ನು ಬಲಪಡಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಶುಕ್ರವಾರ ಘೋಷಿಸಿದೆ.
ಸೆಪ್ಟಂಬರ್ 14ರಂದು ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆದ ಬಳಿಕ, ಹೆಚ್ಚಿನ ಸೈನಿಕರನ್ನು ಒದಗಿಸುವಂತೆ ಸೌದಿ ಅರೇಬಿಯ ಮಾಡಿರುವ ಮನವಿಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ಎರಡು ಫೈಟರ್ ಸ್ಕ್ವಾಡ್ರನ್ಗಳು ಮತ್ತು ಹೆಚ್ಚುವರಿ ಕ್ಷಿಪಣಿ ರಕ್ಷಣಾ ತುಕಡಿಗಳನ್ನು ಸೌದಿ ಅರೇಬಿಯಕ್ಕೆ ಕಳುಹಿಸಲಾಗುತ್ತಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ತಿಳಿಸಿದರು. ಇದರೊಂದಿಗೆ, ಈ ವರ್ಷದ ಸೆಪ್ಟಂಬರ್ ತಿಂಗಳಿನಿಂದ ಸುಮಾರು 3,000 ಅಮೆರಿಕ ಸೈನಿಕರು ಹೊಸದಾಗಿ ಸೌದಿ ಅರೇಬಿಯದಲ್ಲಿ ನಿಯೋಜನೆಯಾದಂತಾಗಿದೆ.
ಸೌದಿ ಅರೇಬಿಯದ ಜಿದ್ದಾ ಆಚೆಗಿನ ಕೆಂಪು ಸಮುದ್ರದಲ್ಲಿ ಇರಾನ್ನ ತೈಲ ಟ್ಯಾಂಕರೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಶುಕ್ರವಾರ ಇರಾನ್ ಹೇಳಿದ ಬಳಿಕ ಈ ವಲಯದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಹಾಗಾಗಿ, ಸೌದಿ ಅರೇಬಿಯಕ್ಕೆ ಹೆಚ್ಚಿನ ಅಮೆರಿಕ ಸೈನಿಕರನ್ನು ನಿಯೋಜಿಸಲಾಗುತ್ತಿದೆ.
ತೈಲ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಗೆ ಇರಾನ್ ತನ್ನ ಬದ್ಧ ವೈರಿ ಸೌದಿ ಅರೇಬಿಯವನ್ನು ದೂರಿಲ್ಲ. ಈ ವಿಷಯದ ಬಗ್ಗೆ ಇನ್ನೂ ಪರಿಶೀಲನೆ ನಡೆಸುತ್ತಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಒಟ್ಟು 84,000 ಸೈನಿಕರು
ಮಧ್ಯ ಪ್ರಾಚ್ಯದಲ್ಲಿ ಈ ವರ್ಷದ ಮೇ ತಿಂಗಳ ವರೆಗೆ ಸುಮಾರು 70,000 ಅಮೆರಿಕ ಸೈನಿಕರಿದ್ದರು. ಆ ಬಳಿಕ ಸುಮಾರು 14,000 ದಷ್ಟು ಹೆಚ್ಚಿನ ಸೈನಿಕರನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ತಿಳಿಸಿದರು.
ಈ ಪೈಕಿ ಹೆಚ್ಚಿನ ಸೈನಿಕರನ್ನು ಇರಾನ್ನ ಚಟುವಟಿಕೆಗಳಿಗೆ ಪ್ರತಿಯಾಗಿ ನಿಯೋಜಿಸಲಾಗಿದೆ.