ಉಡುಪಿ: ನಿರಂತರ ಮಳೆ; ತುಂಬಿ ಹರಿಯುತ್ತಿರುವ ನದಿಗಳು
ಉಡುಪಿ, ಜು.4: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತಿದ್ದು, ಇದರಿಂದ ಈ ಬಾರಿ ಇದೇ ಮೊದಲ ಬಾರಿ ಜಿಲ್ಲೆಯ ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತವಾಗಿವೆ. ಅಲ್ಲದೇ ಜಿಲ್ಲೆಯ ಹೆಚ್ಚಿನೆಲ್ಲಾ ನದಿಗಳು ತುಂಬಿ ಹರಿಯುತ್ತಿವೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನದಿಗಳು ತುಂಬಿ ಹರಿಯ ತೊಡಗಿವೆ. ಆದರೆ ಎಲ್ಲೂ ಅಪಾಯದ ಮಟ್ಟವನ್ನು ಮುಟ್ಟಿಲ್ಲ ಎಂದು ವರದಿಗಳು ತಿಳಿಸಿವೆ. ಬಿರುಸಿನ ಮಳೆ ಮಾತ್ರ ಸುರಿಯುತಿದ್ದು, ಗಾಳಿ ಬೀಸುತ್ತಿಲ್ಲವಾದ ಕಾರಣ ಹೆಚ್ಚಿನ ಹಾನಿ ವರದಿಯಾಗಿಲ್ಲ.
ಶನಿವಾರ ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 81.50ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ ಅತ್ಯಧಿಕ ಅಂದರೆ 103.4ಮಿ.ಮೀ., ಕಾರ್ಕಳದಲ್ಲಿ 90.9ಮಿ.ಮೀ. ಹಾಗೂ ಕುಂದಾಪುರದಲ್ಲಿ 62.0ಮಿ.ಮೀ. ಮಳೆಯಾದ ಬಗ್ಗೆ ವರದಿ ಬಂದಿದೆ.
ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಅಬ್ಬಾಸ್ ಸಾಹೇಬರ ವಾಸ್ತವ್ಯದ ಮನೆ ಭಾರೀ ಮಳೆಗೆ ಭಾಗಶ: ಹಾನಿಯಾಗಿದ್ದು 25,000ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.