ರಾಜ್ಯ ಸರಕಾರಕ್ಕೆ ಒಂದು ವರ್ಷ ಪೂರ್ಣ: ವರ್ಚುವಲ್ ಪ್ಲಾಟ್ಫಾರಂನಲ್ಲಿ ನೇರಪ್ರಸಾರ
ಉಡುಪಿ, ಜು.25: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಒಂದು ವರ್ಷ ಪೂರ್ಣಗೊಳಿಸಿರುವ ಸಂದರ್ಭದ ಪ್ರಥಮ ವರ್ಷದ ಪ್ರಧಾನ ಸಮಾರಂಭ ನವತಂತ್ರಜ್ಞಾನದ ವರ್ಚುವಲ್ ವೇದಿಕೆಯ ಮೂಲಕ ಜು.27ರ ಸೋಮವಾರ ಬೆಳಗ್ಗೆ 11:00ಕ್ಕೆ ವಿಧಾನಸೌಧದ ಬ್ರಾಂಕೈಟ್ ಹಾಲ್ನಲ್ಲಿ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲಿ ಜು.27ರಂದು ಬೆಳಗ್ಗೆ 11:00ಕ್ಕೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕಿರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ನವತಂತ್ರಜ್ಞಾನದ ವರ್ಚುವಲ್ ಪ್ಲಾಟ್ಫಾರಂ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜನಪ್ರತಿನಿಧಿಗಳು , ಅಧಿಕಾರಿಗಳು, ಜಿಲ್ಲೆಯಲ್ಲಿ ಸರಕಾರದ ವಿವಿಧ ಯೋಜನೆ ಗಳ ಪ್ರಯೋಜನ ಪಡೆದ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸರಕಾರದ ಒಂದು ವರ್ಷದ ಸಾಧನೆಗೆ ಸಂಬಂಧಿಸಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿರುವ ಕಿರುಹೊತ್ತಿಗೆ ಹಾಗೂ ಸರಕಾರದ ಒಂದು ವರ್ಷದ ಪ್ರಗತಿ ಸಾಧನೆ ಬಿಂಬಿಸುವ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕದ ಬಿಡುಗಡೆ ನಡೆಯಲಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ತಿಳಿಸಿದ್ದಾರೆ.