ಗಂಗೊಳ್ಳಿ: ದೇವಸ್ಥಾನದೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಪಾರು ಮಾಡಲು ಹೋದ ಇನ್ನಿಬ್ಬರಿಗೆ ಗಾಯ: ಮೂವರು ಆಸ್ಪತ್ರೆಗೆ ದಾಖಲು
ಗಂಗೊಳ್ಳಿ, ಸೆ.17: ಗಂಗೊಳ್ಳಿಯ ಶ್ರೀಮಹಾಕಾಳಿ ದೇವಳದ ಹಿಂಬದಿಯ ದೇವಸ್ಥಾನವೊಂದರಲ್ಲಿ ವ್ಯಕ್ತಿಯೋರ್ವ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಡೆದಿರುವುದು ವರದಿಯಾಗಿದೆ. ಈ ವೇಳೆ ಆತನನ್ನು ರಕ್ಷಿಸಲು ಯತ್ನಿಸಿದ ಇನ್ನಿಬ್ಬರಿಗೂ ತೀವ್ರ ಸುಟ್ಟ ಗಾಯಗಳಾಗಿವೆ.
ಗಂಗೊಳ್ಳಿ ದಾಕುಹಿತ್ಲು ನಿವಾಸಿ ರಾಘವೇಂದ್ರ ಖಾರ್ವಿ(35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಬೆಂಕಿ ನಂದಿಸಲು ಹೋಗಿ ಗಾಯಗೊಂಡವರನ್ನು ಗಂಗೊಳ್ಳಿಯ ಲಕ್ಷ್ಮಣ ಖಾರ್ವಿ ಹಾಗೂ ಜನಾರ್ದನ ಖಾರ್ವಿ ಎಂದು ಗುರುತಿಸಲಾಗಿದೆ. ಮೂವರನ್ನೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವಸ್ಥಾನದಲ್ಲಿ ಇಂದು ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನಡೆಯುತ್ತಿದ್ದು, ಈ ವೇಳೆ ದೇವಸ್ಥಾನದೊಳಗೆ ಬಂದ ರಾಘವೇಂದ್ರ ಖಾರ್ವಿ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು, ದೀಪದಿಂದ ಬೆಂಕಿ ಹಚ್ಚಿಕೊಂಡ ಎನ್ನಲಾಗಿದೆ. ಕೂಡಲೇ ಅಲ್ಲೇ ಇದ್ದ ಕೆಲವರು ಬೆಂಕಿ ನಂದಿಸಲು ಮುಂದಾದರು. ಈ ಸಂದರ್ಭ ಲಕ್ಷ್ಮಣ ಮತ್ತು ಜನಾರ್ದನ ಎಂಬವರು ಸುಟ್ಟ ಗಾಯಗೊಂಡರೆನ್ನಲಾಗಿದೆ.
ರಾಘವೇಂದ್ರ ಆಚಾರ್ಯ ತೀವ್ರ ಸುಟ್ಟಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಆತ್ಮಹತ್ಯೆ ಯತ್ನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಇಬ್ರಾಹೀಂ ಗಂಗೊಳ್ಳಿ ಮತ್ತು ರಜಬ್ ಬುದ್ದ ಗಂಗೊಳ್ಳಿ ಆಪತ್ಬಾಂಧವ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ