ಸುಳ್ಯದಲ್ಲಿ ಗುಂಡಿನ ದಾಳಿ: ಗಾಯಾಳು ಮೃತ್ಯು
ಸುಳ್ಯ: ಸಂಪಾಜೆಯ ಕಳಗಿ ಬಾಲಚಂದ್ರರನ್ನು ಅಪಘಾತ ನಡೆಸಿ ಕೊಲೆ ಮಾಡಿದ ಆರೋಪಿಗಳಲ್ಲಿ ಓರ್ವ ಎಂದು ಗುರುತಿಸಲಾಗಿದ್ದ ಸಂಪಾಜೆ ಕಲ್ಲುಗುಂಡಿಯ ಸಂಪತ್ ಎಂಬಾತನಿಗೆ ಸುಳ್ಯದ ಶಾಂತಿ ನಗರದಲ್ಲಿ ಮುಸುಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಅವರು ಇದೀಗ ಮೃತಪಟ್ಟಿದ್ದಾರೆ.
ಕಳಗಿ ಬಾಲಚಂದ್ರ ಹತ್ಯೆಯ ಆರೋಪಿ ಸಂಪತ್ ಕೆಲ ತಿಂಗಳ ಹಿಂದಕ್ಕೆ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರ ಬಂದಿದ್ದ. ಕಲ್ಲು ಮತ್ತು ಮರಳು ವ್ಯಾಪಾರ ನಡೆಸುತ್ತಿದ್ದ ಸಂಪತ್ ಎಂದಿನಂತೆ ತನ್ನ ವ್ಯವಹಾರದಲ್ಲಿ ತೊಡಗಿಕೊಂಡಿದ್ದ. ಕೆಲವೊಮ್ಮೆ ಆತ ಸುಳ್ಯದ ಶಾಂತಿ ನಗರದಲ್ಲಿರುವ ರಾಮಕೃಷ್ಣ ಎಂಬವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ಎನ್ನಲಾಗಿದೆ. ನಿನ್ನೆಯೂ ಆತ ಶಾಂತಿನಗರದಲ್ಲಿ ಉಳಿದುಕೊಂಡಿದ್ದ. ಇಂದು ಮುಂಜಾನೆ 6.30 ಕ್ಕೆ ಆತ ತನ್ನ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಐದಾರು ಮಂದಿ ಮುಸುಕುಧಾರಿಗಳು ಆತನ ಕಾರನ್ನು ಅಡ್ಡಗಟ್ಟಿ ಕೋವಿಯಿಂದ ಆತನ ಬೆನ್ನಿಗೆ ಗುಂಡಿಕ್ಕಿದ್ದರೆಂದು ಹೇಳಲಾಗಿದೆ.
ಗುಂಡೇಟಿನಿಂದ ಗಂಭೀರ ಗಾಯಗೊಂಡ ಸಂಪತ್ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿ, ಎಸ್.ಐ. ಹರೀಶ್ ಎಂ.ಆರ್. ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಬಂದೋಬಸ್ತ್ ಏರ್ಪಡಿಸಿದ್ದಾರೆ.