ಉಡುಪಿ: ಮಂಗಳವಾರ 174 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿಗೆ ಮಹಿಳೆ ಬಲಿ
ಉಡುಪಿ, ಅ.13: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 174 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಅಲ್ಲದೇ ದಿನದಲ್ಲಿ ಉಡುಪಿಯ 74 ವರ್ಷ ಪ್ರಾಯದ ಮಹಿಳೆಯೊಬ್ಬರು ಕೋವಿಡ್ಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ ಮಕ್ಕಳು ಸೇರಿದಂತೆ 97 ಮಂದಿ ಪುರುಷರು ಹಾಗೂ 77 ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ 55 ಪುರುಷರು ಹಾಗೂ 56 ಮಂದಿ ಮಹಿಳೆಯರಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನ 68, ಕುಂದಾಪುರ ತಾಲೂಕಿನ 40 ಹಾಗೂ ಕಾರ್ಕಳ ತಾಲೂಕಿನ 58 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಉಳಿದಂತೆ ಎಂಟು ಮಂದಿ ಹೊರಜಿಲ್ಲೆಗಳಿಂದ ಚಿಕಿತ್ಸೆಗೆಂದು ಜಿಲ್ಲೆಗೆ ಬಂದು ಇಲ್ಲಿ ಪಾಸಿಟಿವ್ ಬಂದವರು ಎಂದು ಡಾ.ಸೂಡ ವಿವರಿಸಿದರು.
ದಿನದಲ್ಲಿ ಪಾಸಿಟಿವ್ ಬಂದ 174 ಮಂದಿಯಲ್ಲಿ 10 ಮಂದಿಯನ್ನು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದ 164 ಮಂದಿ ತಮ್ಮ ಮನೆಗಳಲ್ಲೇ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್ಓ ಡಾ.ಸೂಡ ತಿಳಿಸಿದರು.
186 ಗುಣಮುಖ: ದಿನದಲ್ಲಿ ಒಟ್ಟು 186 ಮಂದಿ ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಹೀಗೆ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ 17,738 ಆಗಿದೆ. ಜಿಲ್ಲೆಯಲ್ಲಿ ಸದ್ಯ 1994 ಸಕ್ರೀಯ ಕೋವಿಡ್ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದವರು ತಿಳಿಸಿದರು.
1234 ನೆಗೆಟಿವ್: ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 1431 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಇವರಲ್ಲಿ 1234 ಮಂದಿ ನೆಗೆಟಿವ್ ಬಂದಿದ್ದು, 197 ಮಂದಿ ಪಾಸಿಟಿವ್ ಬಂದಿದ್ದಾರೆ. ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 19,922 ಆಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,48,476 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1,28,554 ಮಂದಿಯ ನೆಗೆಟಿವ್ ಬಂದಿದ್ದು, 19,922 ಮಂದಿಯ ವರದಿ ಪಾಸಿಟಿವ್ ಬಂದಿದೆ. ಇವರಲ್ಲಿ 17,738 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 168 ಮಂದಿ ಮೃತಪಟ್ಟಿದ್ದಾರೆ.
ಒಬ್ಬರು ಬಲಿ: ಮಂಗಳವಾರ ಜಿಲ್ಲೆಯಲ್ಲಿ ಒಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಬಹುಅಂಗ ವೈಫಲ್ಯಕ್ಕೊಳಗಾದ ಉಡುಪಿ ತಾಲೂಕಿನ 74 ವರ್ಷ ಪ್ರಾಯದ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಕೋವಿಡ್ಗೆ ಪಾಸಿಟಿವ್ ಬಂದು ತೀವ್ರ ಉಸಿರಾಟ ತೊಂದರೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.