ಅಫ್ಘಾನ್: ದಾಳಿಯ ಸೂತ್ರಧಾರಿಯ ಹತ್ಯೆ
ಕಾಬೂಲ್ (ಅಫ್ಘಾನಿಸ್ತಾನ), ನ. 30: ಕನಿಷ್ಠ 30 ಭದ್ರತಾ ಸಿಬ್ಬಂದಿಯ ಸಾವಿಗೆ ಕಾರಣವಾದ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯ ತಾಲಿಬಾನ್ ಸೂತ್ರಧಾರಿಯನ್ನು ಅಫ್ಘಾನಿಸ್ತಾನ್ ಪಡೆಗಳು ಕೊಂದಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ಘಝನಿ ಪ್ರಾಂತದಲ್ಲಿ ರವಿವಾರ ರಾತ್ರಿ ನಡೆದ ವಾಯು ದಾಳಿಯೊಂದರಲ್ಲಿ ಸೂತ್ರಧಾರಿ ಹಂಝ ವಝೀರಿಸ್ತಾನಿ ಹತನಾಗಿದ್ದಾನೆ ಎಂದು ರಕ್ಷಣಾ ಸಚಿವಾಲಯವು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಘಝನಿಯಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯ ಹಿಂದಿನ ಸೂತ್ರಧಾರಿಯು ಇತರ ಏಳು ಭಯೋತ್ಪಾದಕರೊಂದಿಗೆ ಹತನಾಗಿದ್ದಾನೆ’’ ಎಂದು ಹೇಳಿಕೆ ತಿಳಿಸಿದೆ.
ರವಿವಾರ ಘಝನಿಯ ಸೇನಾ ನೆಲೆಯೊಂದನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯಲ್ಲಿ 30 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
Next Story