ಸುರತ್ಕಲ್ ಟೋಲ್ ಪ್ಲಾಝಾದಲ್ಲಿ ಸಿಬ್ಬಂದಿಗಳಿಗೆ ಹಲ್ಲೆ: ದೂರು
ಸುರತ್ಕಲ್, ಜ. 4: ಸುರತ್ಕಲ್ ಟೋಲ್ ಗೇಟ್ನಲ್ಲಿ ಕೆಎ 47 ನೋಂದಣಿಯಾಗಿರುವ ಕಾರೊಂದರ ಚಾಲಕನಲ್ಲಿ ಟೋಲ್ ಶುಲ್ಕ ಕೇಳಿದ್ದಕ್ಕೆ ಸಿಬ್ಬಂದಿಗಳಿಗೆ ಏಳೆಂಟು ಮಂದಿಯ ತಂಡವೊಂದು ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆಯ ಬಗ್ಗೆ ಟೋಲ್ ಗುತ್ತಿಗೆ ಸಂಸ್ಥೆಯು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಟೋಲ್ ಪ್ಲಾಝಾ ಸಿಬ್ಬಂದಿ ನಿತಿನ್ ಕೈಗೆ ಗಾಯವಾಗಿದ್ದರೆ, ಸುಚಿನ್ ಮೇಲೆಯೂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿವಾರ ರಾತ್ರಿ ಟೋಲ್ ಕೇಳಿದನ್ನು ನೆಪ ಮಾಡಿಕೊಂಡು ವಾಹನದಿಂದ ಇಳಿದು ಹಲ್ಲೆ ನಡೆಸಿದ್ದಲ್ಲದೆ ಟೋಲ್ ಕೇಂದ್ರದ ಒಳಗೆ ನುಗ್ಗಿ ದಾಂಧಲೆ ನಡೆಸಿ ಕಾರಿನಲ್ಲೇ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಸುರತ್ಕಲ್ ಪೊಲೀಸರಿಗೆ ಘಟನೆಯ ವೀಡಿಯೋ ಸಹಿತ ದೂರು ನೀಡಲಾಗಿದೆ.
Next Story