ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆ: ಆನ್ಲೈನ್ ಮೂಲಕ ಶೇ.50 ಮತದಾನ
ಮಂಗಳೂರು, ಜ.11: ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಆನ್ಲೈನ್ ಮೂಲಕ ಸೋಮವಾರ ನಡೆದ ಚುನಾವಣೆಯಲ್ಲಿ ಶೇ 50 ಮತದಾನವಾಗಿದೆ. ಜ.13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ, ಬಂಟ್ವಾಳ ಪುರಸಭಾ ಸದಸ್ಯ ಲುಕ್ಮಾನ್ ಬಂಟ್ವಾಳ, ಸುರತ್ಕಲ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಮುಹಮ್ಮದ್ ಶುಹೈಬ್ ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ. ಆ ಪೈಕಿ ಲುಕ್ಮಾನ್ ಬಂಟ್ವಾಳ ಮತ್ತು ಗಿರೀಶ್ ಆಳ್ವ ಮಧ್ಯೆ ಬಿರುಸಿನ ಪೈಪೋಟಿ ನಡೆದಿದೆ. ಹಾಗಾಗಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಯಾರು ಎಂಬ ಕುತೂಹಲ ಪಕ್ಷದ ವಲಯದಲ್ಲಿ ಹೆಚ್ಚಿವೆ.
ದ.ಕ.ಜಿಲ್ಲೆಯ ನೋಂದಾಯಿತ ಯುವ ಕಾಂಗ್ರೆಸ್ನ 29,681 ಮತದಾರರ ಪೈಕಿ 14,065 ಮಂದಿ ಮತ ಚಲಾಯಿಸಿದ್ದಾರೆ. 9ರಿಂದ ಸಂಜೆ 4ರವರೆಗೆ ‘ಐವೈಸಿ ಸೆಲ್ಫ್ ವೋಟಿಂಗ್ ಆ್ಯಪ್’ ಬಳಸಿ ಚುನಾವಣೆ ನಡೆದಿತ್ತು.
ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರ ಕಲ್ಪನೆಯಂತೆ ನಡೆಯುವ ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತ ಪಡೆದವರು ಅಧ್ಯಕ್ಷರಾಗಿ ಆಯ್ಕೆಯಾದರೆ ಉಳಿದಂತೆ ಗಳಿಸಿದ ಮತಗಳಿಗೆ ಅನುಗುಣವಾಗಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ.