ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಫೇಸ್ಬುಕ್ನಲ್ಲಿ ನಿಂದನೆ : ದೂರು ದಾಖಲು
ಕೋಟ, ಜ.21: ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಫೇಸ್ ಬುಕ್ನಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನಾತ್ಮಕ ಪೋಸ್ಟ್ ಮಾಡಿದ್ದ ಯುವಕನ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೆರ್ಡೂರಿನ ಅನಿಲ್ ಕುಮಾರ್ ಶೆಟ್ಟಿ ಎಂಬಾತನೇ ಸಚಿವರ ವಿರುದ್ಧ ನಿಂದನಾತ್ಮಕ ಪೋಸ್ಟ್ ಮಾಡಿದವ. ಬಿಲ್ಲವ ಈಡಿಗ ಉಪಪಂಗಡಗಳ ಮಹಿಳೆ ಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲು ಒಟ್ಟು 50 ಕೋಟಿ ರೂ.ವನ್ನು ಬಜೆಟ್ನಲ್ಲಿ ಮೀಸಲಿಡುವಂತೆ ಕೋರಿ ಸಚಿವ ಶ್ರೀನಿವಾಸ್ ಪೂಜಾರಿ ಅವರು ಇತ್ತೀಚೆಗೆ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದರು.
ಮನವಿ ಸಲ್ಲಿಸುತ್ತಿರುವ ಛಾಯಾಚಿತ್ರವನ್ನು ಬಳಸಿಕೊಂಡು ಜಾತಿ ರಾಜಕೀಯ ಎನ್ನುವ ರೀತಿಯಲ್ಲಿ ಅನಿಲ್ ಕುಮಾರ್ ಶೆಟ್ಟಿ ಅವಾಚ್ಯ ಶಬ್ದಗಳನ್ನು ಬಳಸಿ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವಂತೆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದು, ತನ್ನ ಫೇಸ್ಬುಕ್ ಅಕೌಂಟ್ ನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಆದರೆ ಈ ಪೋಸ್ಟ್ನ್ನು ಬಳಸಿ ಸಚಿವರ ಅಭಿಯಾನಿಯೊಬ್ಬರು ಕೋಟ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.