ಉಡುಪಿ ಜಿಲ್ಲೆಯ 74,049 ಮಕ್ಕಳಿಗೆ ಪಲ್ಸ್ ಪೋಲಿಯೋ: ಜಿಲ್ಲಾಧಿಕಾರಿ
ಉಡುಪಿ, ಜ.28: ಉಡುಪಿ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಒಟ್ಟು 74,049 ಮಕ್ಕಳಿಗೆ (ಗ್ರಾಮೀಣ ಪ್ರದೇಶ 65326+ ನಗರ ಪ್ರದೇಶ 8723) ಜನವರಿ 31ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 657 ಲಸಿಕಾ ಕೇಂದ್ರಗಳನ್ನು ತೆರೆಯಲಿದ್ದು, (ಗ್ರಾಮೀಣ ಪ್ರದೇಶ 585, ನಗರ ಪ್ರದೇಶ 72) ಅಲ್ಲದೇ 8 ಮೊಬೈಲ್ ತಂಡ ಮತ್ತು 37 ಟ್ರಾನ್ಸಿಟ್ ಬೂತ್ಗಳನ್ನು ತೆರೆದು ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಅಲ್ಲದೇ ಜಿಲ್ಲೆಯ ಎಲ್ಲಾ ಟೋಲ್ಗೇಟ್ಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆದು, 0-5 ವರ್ಷ ದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ 2,768 ಲಸಿಕಾ ಸ್ವಯಂಸೇವಕರು, 133 ಮೇಲ್ವಿಚಾರಕರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ ಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಆರೋಗ್ಯ, ಪಂಚಾಯತ್ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ ಇಲಾಖೆ ಮತ್ತು ಇತರ ಇಲಾಖೆ, ರೋಟರಿ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳ ಸಹಕಾರ, ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು ತಮ್ಮ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕಾ ಕೇಂದ್ರ ಗಳಲ್ಲಿ ಲಸಿಕೆ ಹಾಕಿಸಿ ಸಹಕರಿಸುವಂತೆ ಕೋರಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಫೆ.1 ಮತ್ತು 2ರಂದು ಹಾಗೂ ನಗರ ಪ್ರದೇಶ ದಲ್ಲಿ ಫೆ.1ರಿಂದ 3ರವರೆಗೆ ಸ್ವಯಂಸೇವಕರು ಮನೆ ಮನೆಗೆ ಭೇಟಿ ನೀಡಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಹನಿ ಹಾಕಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲಿದ್ದಾರೆ ಎಂದವರು ತಿಳಿಸಿದರು.