ಉಡುಪಿ: ವಾಹನ ಪಾರ್ಕಿಂಗ್ಗೆ ಮೀಸಲಿರಿಸಿದ ಸ್ಥಳದ ವಾಣಿಜ್ಯ ಅಂಗಡಿಗಳನ್ನು ತೆರವುಗೊಳಿಸಲು ಸೂಚನೆ
ಉಡುಪಿ, ಫೆ.24: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಬಹು ಮಹಡಿ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಅನುಮೋದಿತ ನಕ್ಷೆಯಲ್ಲಿ ರುವಂತೆ ವಾಹನ ಪಾರ್ಕಿಂಗ್ಗೆ ಸ್ಥಳಾವಕಾಶ ಕಲ್ಪಿಸಬೇಕಾಗಿದೆ.
ಆದರೆ ಕೆಲವು ವಾಣಿಜ್ಯ ಸಂಕೀರ್ಣ ಮತ್ತು ವಸತಿ ಸಮುಚ್ಛಯದವರು ಅನುಮೋದಿತ ನಕ್ಷೆಯಂತೆ ಪಾರ್ಕಿಂಗ್ ಜಾಗವನ್ನು ಅತಿಕ್ರಮಿಸಿ ವಾಣಿಜ್ಯ ಹಾಗೂ ಇತರೇ ಚಟುವಟಿಕೆಗಳಿಗೆ ಬಳಸುತ್ತಿರುವುದು ಕಂಡುಬಂದಿದ್ದು, ಇದು ಕಾನೂನುಬಾಹಿರವಾಗಿದೆ. ಇದರಿಂದ ಸಾರ್ವಜನಿಕರು/ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆ ಬದಿಯ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿರುವುದರಿಂದ ಸುಗಮ ಜನಸಂಚಾರ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿರುವುದು ಜಿಲ್ಲಾಡಳಿತ ಹಾಗೂ ನಗರಸಭೆಯ ಗಮನಕ್ಕೆ ಬಂದಿದೆ.
ಆದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಬಹುಮಹಡಿ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ವಾಹನ ಪಾರ್ಕಿಂಗ್ಗಾಗಿ ಮೀಸಲಿರಿ ಸಿದ ಸ್ಥಳಗಳಲ್ಲಿರುವ ವಾಣಿಜ್ಯ ಅಂಗಡಿಗಳನ್ನು ತೆರವುಗೊಳಿಸಿ, ಮಂಜೂರಾದ ಅನುಮೋದಿತ ನಕ್ಷೆಯಂತೆ ವಾಹನ ನಿಲುಗಡೆಗೆ 15 ದಿನಗಳಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿಕೊಡಬೇಕು. ತಪ್ಪಿದ್ದಲ್ಲಿ ಈ ಸಮುಚ್ಛಯಗಳಿಗೆ ನೀಡಲಾದ ಮೂಲೂತ ಸೌಕರ್ಯಗಳನ್ನು ಸ್ಥಗಿತಗೊಳಿಸಲಾಗುವುದು ನಗರಸಭಾ ಪೌರಾಯುಕ್ತರು ಎಚ್ಚರಿಸಿದ್ದಾರೆ.
ಅಲ್ಲದೇ ತಪ್ಪು ಮಾಹಿತಿ ನೀಡಿ ಪಡೆಯಲಾದ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಿ, ಅಕ್ರಮವಾಗಿ ಪಾರ್ಕಿಂಗ್ ಜಾಗದಲ್ಲಿ ನಿರ್ಮಿಸಿರುವ ನಿರ್ಮಾಣವನ್ನು ನಗರಸಭೆಯಿಂದ ಪರಿಶೀಲಿಸಿ, ತೆರವುಗೊಳಿಸಿ, ಬಾರಿ ದಂಡದೊಂದಿಗೆ ಕ್ರಮ ವಹಿಸಲಾಗುವುದು. ಈ ಪ್ರಕ್ರಿಯೆಗಳಿಂದ ಉಂಟಾಗುವ ಯಾವುದೇ ಹಾನಿಗೆ ನಗರಸಭೆ ಜವಾಬ್ದಾರಿಯಾಗುವುದಿಲ್ಲ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.