ಜೋಕಟ್ಟೆ : ಜೆ. ಮುಹಮ್ಮದ್ ಹಾಜಿ ನಿಧನ
ಮಂಗಳೂರು : ಜೋಕಟ್ಟೆ ಹೊಸ ಮಸೀದಿಯ ಮಾಜಿ ಅಧ್ಯಕ್ಷ ಜೆ. ಮುಹಮ್ಮದ್ ಹಾಜಿ (72) ಶುಕ್ರವಾರ ರಾತ್ರಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಪಿಡಬ್ಲ್ಯುಡಿ ಕ್ಲಾಸ್ ವನ್ ಕಾಂಟ್ರಾಕ್ಟರ್ ಆಗಿದ್ದ ಅವರು ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಆರಂಭಿಸಿದರು. ಸುರತ್ಕಲ್ ಬ್ಲಾಕ್ ಕಾಂಗ್ರೆಸ್ನ ಉಪಾಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಕೆಡಿಪಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಜೋಕಟ್ಟೆ ವಲಯ ಕಾಂಗ್ರೆಸ್ ಪಕ್ಷದ ನಿರ್ಣಾಯಕ ವ್ಯಕ್ತಿಯಾಗಿದ್ದ ಅವರು ಜನಾನುರಾಗಿಯಾಗಿದ್ದರು. ಜೋಕಟ್ಟೆ ಹೊಸ ಮಸೀದಿಯ ಪುನರ್ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಈ ಮಸೀದಿಯ ಅಧ್ಯಕ್ಷರಾಗಿ 10ಕ್ಕೂ ಹೆಚ್ಚು ವರ್ಷ ಕಾಲ ಸೇವೆ ಸಲ್ಲಿಸಿದ್ದರು.
ಸುರತ್ಕಲ್ ವಲಯ 16 ಜಮಾಅತ್ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. ಜೋಕಟ್ಟೆ ಯುವಕ ಮಂಡಲದ ಅಧ್ಯಕ್ಷರಾಗಿ, ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪಕಾಧ್ಯಕ್ಷರಾಗಿ, ಅಂಜುಮಾನ್ ಖುವ್ವತುಲ್ ಇಸ್ಲಾಮ್ನ ಅಧ್ಯಕ್ಷರಾಗಿ, ಜೋಕಟ್ಟೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಬಜ್ಪೆ ಸೈಂಟ್ ಜೋಸೆಫ್ ಕಾಲೇಜಿನ ಸಮಿತಿಗಳಲ್ಲಿ ಪದಾಧಿಕಾರಿಯಾಗಿದ್ದರು.