ಬಿ.ಸಿ.ರೋಡ್ : ಯುವಕನಿಗೆ ಚೂರಿ ಇರಿತ
ಬಂಟ್ವಾಳ, ಎ.4: ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯುವಕನೋರ್ವನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಿ.ಸಿ.ರೋಡ್ ನಲ್ಲಿ ರವಿವಾರ ರಾತ್ರಿ ನಡೆದಿದೆ.
ಬ್ರಹ್ಮರಕೋಟ್ಲು ವಳವೂರು ನಿವಾಸಿ ಮನೋಜ್ ಸಪಲ್ಯ (30) ಚೂರಿ ಇರಿತಕ್ಕೊಳಗಾದ ಯುವಕ ಎಂದು ತಿಳಿದು ಬಂದಿದೆ.
ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ದುಷ್ಕರ್ಮಿಗಳು ಯುವಕನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮನೋಜ್ ತುಂಬೆಯಿಂದ ಬಿ.ಸಿ.ರೋಡ್ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಇಬ್ಬರು ಅಪರಿಚಿತರು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದು ಇದನ್ನು ಗಮನಿಸಿದ ಮನೋಜ್ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಬೈಕನ್ನು ತಿರುಗಿಸಿ ಅಂಗಡಿಯೊಂದರ ಮುಂಭಾಗ ನಿಲ್ಲಿಸಿದರು. ಈ ವೇಳೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.
ಗಾಯಗೊಂಡ ಮನೋಜ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೋಜ್ ವಿದೇಶದಲ್ಲಿ ಸಿವಿಲ್ ಇಂಜಿನಿಯರಿಂಗ್ ಉದ್ಯೋಗದಲ್ಲಿದ್ದು ಎರಡು ವಾರಗಳ ಹಿಂದೆಯಷ್ಟೆ ಊರಿಗೆ ಬಂದಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್ಪಿ ವೆಲೈಂಟೈನ್ ಡಿಸೋಜ, ಬಂಟ್ವಾಳ ನಗರ ಠಾಣಾ ಇನ್ ಸ್ಪೆಕ್ಟರ್ ಚೆಲುವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.