ಕೊಡಾಜೆಯಲ್ಲಿ ಮತ್ತೆ ಸರಣಿ ಅಪಘಾತ: ಇಬ್ಬರಿಗೆ ಗಂಭೀರ ಗಾಯ
ಬಂಟ್ವಾಳ, ಎ.23: ಮಾಣಿ - ಮಠ ರಸ್ತೆಯ ಅಪಘಾತ ವಲಯ ಎಂದೇ ಹೇಳಲಾಗುತ್ತಿರುವ ಕೊಡಾಜೆಯಲ್ಲಿ ಶುಕ್ರವಾರ ಬೆಳಗ್ಗೆ ಮತ್ತೆ ಮೂರು ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಮತ್ತು ಮಾಣಿಯಿಂದ ಪುತ್ತೂರಿಗೆ ತೆರಳುತ್ತಿದ್ದ ಟಾಟಾ ಏಸ್ ವಾಹನ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಈ ವೇಳೆ ಟಾಟಾ ಏಸ್ ವಾಹನದ ಹಿಂದಿನಿಂದ ಬರುತ್ತಿದ್ದ ಬೈಕ್ ನಿಯಂತ್ರಣ ಕಳೆದು ಟಾಟಾ ಏಸ್ಗೆ ಢಿಕ್ಕಿಯಾಗಿದೆ. ಘಟನೆಯಿಂದ ಟಾಟಾ ಏಸ್ ಚಾಲಕ ಮತ್ತು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ಸ್ಥಳದಲ್ಲಿ ಕೆಲವು ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story