ಉಡುಪಿ: ಕೋವಿಡ್ ಗೆ 10 ಬಲಿ; 1047 ಮಂದಿಯಲ್ಲಿ ಕೊರೋನ ಸೋಂಕು
ಉಡುಪಿ, ಮೇ 8: ಕೋವಿಡ್-19ರ ಎರಡನೇ ಅಲೆ ಉಡುಪಿ ಜಿಲ್ಲೆಯಲ್ಲಿ ತನ್ನ ಕರಾಳ ಮುಖವನ್ನು ತೋರಿಸುತಿದ್ದು, ದಿನದಿಂದ ದಿನಕ್ಕೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಶನಿವಾರ ಕೋವಿಡ್ಗೆ ಬಲಿಯಾದವರ ಸಂಖ್ಯೆ 10ಕ್ಕೇರಿದ್ದು, ಮೇ ತಿಂಗಳ ಮೊದಲ ಎಂಟು ದಿನಗಳಲ್ಲಿ ಒಟ್ಟು 30 ಮಂದಿ ರೋಗಕ್ಕೆ ಸಾವನ್ನಪ್ಪಿದಂತಾಗಿದೆ. ಈ ಮೂಲಕ ಕೋವಿಡ್ಗೆ ಬಲಿಯಾದವರ ಸಂಖ್ಯೆ ಜಿಲ್ಲೆಯಲ್ಲಿ 228ಕ್ಕೇರಿದೆ.
ಕಳೆದ ಮೂರು ದಿನಗಳಲ್ಲೇ ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ 22 (6,6,10) ಆಗಿದ್ದು, ಕೋವಿಡ್ ಕುರಿತಂತೆ ಇರುವ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತಂತೆ ಇದು ಜಿಲ್ಲೆಯ ಜನ ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ.
ಇದರೊಂದಿಗೆ ದಿನದಲ್ಲಿ ಒಟ್ಟು 1047 ಮಂದಿ ಹೊಸದಾಗಿ ಪಾಸಿಟಿವ್ ಬಂದಿದ್ದಾರೆ. ಶನಿವಾರ 328 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ ಈಗ 5958ಕ್ಕೆ ನೆಗೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಶನಿವಾರ ಕೋವಿಡ್ ಸೋಂಕಿನೊಂದಿಗೆ ಮೃತಪಟ್ಟ 10 ಮಂದಿಯಲ್ಲಿ ನಾಲ್ವರು (41, 69, 78, 66 ವರ್ಷ) ಪುರುಷರಾದರೆ, ಆರು ಮಂದಿ (75, 76, 79, 73, 55, 68 ವರ್ಷ) ಮಹಿಳೆಯರು. ಉಡುಪಿ ತಾಲೂಕಿನ ಐವರು, ಕಾರ್ಕಳ ತಾಲೂಕಿನ ನಾಲ್ವರು ಹಾಗೂ ಕುಂದಾಪುರ ತಾಲೂಕಿನ ಒಬ್ಬರು ಮೃತರಲ್ಲಿ ಸೇರಿದ್ದಾರೆ.
ಆರೋಗ್ಯ ಕಾರ್ಯಕರ್ತ: ಮೃತರಲ್ಲಿ ಒಬ್ಬರು (41ವರ್ಷ) ಆರೋಗ್ಯ ಕಾರ್ಯಕರ್ತರಾಗಿದ್ದು, ಅವರು ಮನೆಯಿಂದ ಕಾರ್ಕಳ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಉಳಿದಂತೆ ಮೂವರು ಕಾರ್ಕಳ ಸರಕಾರಿ ಆಸ್ಪತ್ರೆ, ಒಬ್ಬರು ಜಿಲ್ಲಾಸ್ಪತ್ರೆ, ಮಣಿಪಾಲದಲ್ಲಿ ಇಬ್ಬರು, ಉಡುಪಿ, ಕುಂದಾಪುರ, ಬ್ರಹ್ಮಾವರ ಖಾಸಗಿ ಆಸ್ಪತ್ರೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇಂದು ಮೃತರಲ್ಲಿ ಹೆಚ್ಚಿನವರು ಬಜಗೋಳಿ, ಕುಂಟಾಡಿ, ನಂದಿಕೂರು, ಸಾಲ್ಮರ, ಮುಂಡ್ಕೂರು, ಬೈಕಾಡಿ, ಗಂಗೊಳ್ಳಿ, ಶಿರ್ವ, ಮಂಚಕಲ್ನಂಥ ಗ್ರಾಮೀಣ ಪ್ರದೇಶದವರಾಗಿದ್ದಾರೆ.
ಇಂದು ಪಾಸಿಟಿವ್ ಬಂದ 1047 ಮಂದಿಯಲ್ಲಿ 551 ಮಂದಿ ಪುರುಷ ರಾದರೆ, ಉಳಿದ 496 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 645, ಕುಂದಾಪುರ ತಾಲೂಕಿನ 347 ಹಾಗೂ ಕಾರ್ಕಳ ತಾಲೂಕಿನ 45 ಮಂದಿ ಇದ್ದು, ಉಳಿದ 10 ಮಂದಿ ಹೊರಜಿಲ್ಲೆಗಳಿಂದ ವಿವಿಧ ಕಾರಣಗಳ ಮೇಲೆ ಉಡುಪಿಗೆ ಆಗಮಿಸಿದವರಾಗಿದ್ದಾರೆ.
ಶುಕ್ರವಾರ 328 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 32,720 ಕ್ಕೇರಿದೆ. ನಿನ್ನೆ ಜಿಲ್ಲೆಯ 2807 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿ ಕೊಂಡಿ ದ್ದಾರೆ. ಇಂದಿನ 1047 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 38,916 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,25,950 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಲಸಿಕೆ: ಶನಿವಾರ ಜಿಲ್ಲೆಯಲ್ಲಿ ಒಟ್ಟು 829 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇವರಲ್ಲಿ 17 ಮಂದಿ ಮೊದಲ ಹಾಗೂ 812 ಮಂದಿ ಎರಡನೇ ಡೋಸ್ ಪಡೆದರು. ಇವರಲ್ಲಿ 45 ವರ್ಷ ಮೇಲಿನ 768 ಮಂದಿ ಇದ್ದರೆ ಉಳಿದವರು ಆರೋಗ್ಯ ಕಾರ್ಯಕರ್ತರು (48) ಹಾಗೂ ಕೊರೋನ ಮುಂಚೂಣಿ ಯೋಧರು (13) ಎಂದು ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.