ಅಪ್ರಾಪ್ತೆಯ ಅತ್ಯಾಚಾರ ಆರೋಪ: ದೂರು ದಾಖಲು
ಮಂಗಳೂರು, ಜೂ.19: ನಗರದ ಅನ್ಸಾರಿ ರಸ್ತೆಯ ಮನೆಯೊಂದರಲ್ಲಿ ರಿಕ್ಷಾ ಚಾಲಕನೊಬ್ಬ ಅಪ್ರಾಪ್ತೆಯ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.11ರಂದು ಅಸೌಖ್ಯದಿಂದಿದ್ದ ಅಪ್ರಾಪ್ತೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂ.12ರಂದು ಕೆಎಂಸಿ ಆಸ್ಪತ್ರೆಗೆ ಆರೋಪಿಯ ರಿಕ್ಷಾದಲ್ಲಿ ತೆರಳಿದ್ದಳು. ಈ ಸಂದರ್ಭ ಆರೋಪಿ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ. ಜೂ.13ರಂದು ಆಸ್ಪತ್ರೆಗೆ ತೆರಳಿ ಹಣ್ಣು ಹಂಪಲು ನೀಡಿ ಬಂದಿದ್ದ. ಜೂ.16ರಂದು ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಮಾಡಿ ಆತನ ಪರಿಚಯದ ಅನ್ಸಾರಿ ರಸ್ತೆಯಲ್ಲಿರುವ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಯಾರಲ್ಲಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
Next Story