ಬಹರೈನ್: ಬೃಹತ್ ರಕ್ತದಾನ ಶಿಬಿರ
ಬಹರೈನ್ : ಇಂಡಿಯನ್ ಸೋಷಿಯಲ್ ಫೋರಮ್ ಬಹರೈನ್ ಮತ್ತು ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವು ಸಲ್ಮಾನಿಯಾ ಆಸ್ಪತ್ರೆ ರಕ್ತನಿಧಿ ಬಹರೈನ್ ನಲ್ಲಿ ನಡೆಯಿತು.
ರಕ್ತದಾನ ಶಿಬಿರದಲ್ಲಿ ಇಂಡಿಯನ್ ಸೋಷಿಯಲ್ ಫೋರಮ್ ಬಹರೈನ್ ಸೆಂಟ್ರಲ್ ಅಧ್ಯಕ್ಷರಾದ ಅಬ್ದುಲ್ ಜವಾದ್ ಪಾಷಾ, ಇಂಡಿಯನ್ ಸೋಷಿಯಲ್ ಕರ್ನಾಟಕ ಇದರ ಅಧ್ಯಕ್ಷರಾದ ಇರ್ಫಾನ್ ಅಬ್ದುಲ್ ರಹಿಮಾನ್, ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಉಪಾಧ್ಯಕ್ಷ ಅಬೂಬಕ್ಕರ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಬಹರೈನ್ ಉಸ್ತುವಾರಿ ಫಾರೂಕ್ ಫಾದ್, ಕನ್ನಡ ಸಂಘ ಬಹರೈನ್ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಇನ್ನಿತರ ಸಂಘ ಸಂಸ್ಥೆಯ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರದಲ್ಲಿ ಒಟ್ಟು 82 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.