ಉಡುಪಿ: 10 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ
ಜಿಲ್ಲೆಯಲ್ಲಿ 20 ದಿನಗಳ ಬಳಿಕ ಸೊಂಕಿಗೆ ವೃದ್ಧನ ಬಲಿ
ಉಡುಪಿ, ಅ.16: ಜಿಲ್ಲೆಯಲ್ಲಿ 20 ದಿನಗಳ ಬಳಿಕ ಕೋವಿಡ್ ಸೋಂಕಿಗೆ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ ಶನಿವಾರ 10 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ದಿನದಲ್ಲಿ 12 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, 82 ಮಂದಿ ಇನ್ನೂ ಸೋಂಕಿಗೆ ಸಕ್ರಿಯರಾಗಿದ್ದು ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಉಡುಪಿಯ 75 ವರ್ಷ ಪ್ರಾಯದ ವೃದ್ಧರೊಬ್ಬರು ಸೋಂಕಿಗೆ ಮೃತ ಪಟ್ಟಿರುವುದು ಇಂದು ವರದಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 475ಕ್ಕೇರಿದೆ. ಕೋವಿಡ್ನ ಗುಣಲಕ್ಷಣ ದೊಂದಿಗೆ ತೀವ್ರ ಉಸಿರಾಟದ ತೊಂದರೆ, ನ್ಯುಮೋನಿಯಾದಿಂದ ಬಳಲಿದ ಇವರು ಅ.9ರಂದು ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅ.14ರಂದು ಮೃತಪಟ್ಟರು. ಅವರು ಮಧುಮೇಹ ಹಾಗೂ ಮೂತ್ರಕೋಶದ ಸೋಂಕಿಗೂ ತುತ್ತಾಗಿದ್ದರು ಎಂದು ವರದಿ ತಿಳಿಸಿದೆ.
ದಿನದಲ್ಲಿ ಸೋಂಕು ದೃಢಪಟ್ಟ 10 ಮಂದಿಯಲ್ಲಿ ನಾಲ್ವರು ಪುರುಷರು ಹಾಗೂ 6 ಮಂದಿ ಮಹಿಳೆಯರು. ಇವರಲ್ಲಿ 6 ಮಂದಿ ಉಡುಪಿ ತಾಲೂಕಿ ನವರಾದರೆ, ಇಬ್ಬರು ಕುಂದಾಪುರ ಹಾಗೂ ಒಬ್ಬರು ಕಾರ್ಕಳ ತಾಲೂಕಿನವರು. ಇನ್ನೊಬ್ಬರು ಹೊರಜಿಲ್ಲೆಯ ವರು. ಇವರಲ್ಲಿ ಐವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಉಳಿದವರಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು 12 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 76,017 ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 2461 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,574ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 11,82,861 ಮಂದಿಯನ್ನು ಕೋವಿಡ್ ಪರೀಕ್ಷೆಗೊಳ ಪಡಿಸಲಾಗಿದೆ.
5016 ಮಂದಿಗೆ ಲಸಿಕೆ: ಇಂದು ಜಿಲ್ಲೆಯಲ್ಲಿ ಒಟ್ಟು 5016 ಮಂದಿ ಲಸಿಕೆಯನ್ನು ಸ್ವೀಕರಿಸಿದ್ದು, ಇವರಲ್ಲಿ 660 ಮಂದಿ ಮೊದಲ ಡೋಸ್ ಹಾಗೂ 4356 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 415 ಮಂದಿ ಮೊದಲ ಡೋಸ್ ಹಾಗೂ 2583 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 245 ಮಂದಿ ಮೊದಲ ಡೋಸ್ ಹಾಗೂ 1773 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.