ಉಡುಪಿ ಜಿಲ್ಲೆಯಲ್ಲಿ ಒಟ್ಟು 12 ಲಕ್ಷ ಮಂದಿಯ ಕೋವಿಡ್ ಪರೀಕ್ಷೆ; ರವಿವಾರ ನಾಲ್ವರಿಗೆ ಕೊರೋನ ಸೋಂಕು
ಉಡುಪಿ, ಅ.24: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪತ್ತೆಗಾಗಿ ಸ್ವಾಬ್ ಪರೀಕ್ಷೆ ಮಾಡಿಸಿಕೊಂಡವರ ಸಂಖ್ಯೆ ಇಂದು 12 ಲಕ್ಷವನ್ನು ದಾಟಿದೆ. ಇಂದು ಒಟ್ಟು 3298 ಮಂದಿಯನ್ನು ಸೋಂಕಿಗಾಗಿ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ ಕೇವಲ ನಾಲ್ವರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷೆಗೊಳಗಾದವರ ಸಂಖ್ಯೆ 12,02,805ಕ್ಕೇರಿದೆ. ಇವರಲ್ಲಿ 76,655 ಮಂದಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ರವಿವಾರ ಎಂಟು ಮಂದಿ ಕೋವಿಡ್ನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 61ಕ್ಕಿಳಿದಿದೆ. ದಿನದಲ್ಲಿ ಸೋಂಕು ದೃಢಪಟ್ಟ ನಾಲ್ವರಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷರಾಗಿದ್ದಾರೆ. ಎಲ್ಲಾ ನಾಲ್ವರು ಉಡುಪಿ ತಾಲೂಕಿನವರು ಎಂದು ಡಿಎಚ್ಓ ತಿಳಿಸಿದ್ದಾರೆ.
ಇಂದು ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ. ಪಾಸಿಟಿವ್ ಬಂದವರಲ್ಲಿ ಒಬ್ಬನಿಗೆ ಕೋವಿಡ್ ಆಸ್ಪತ್ರೆಯಲ್ಲಿ ಉಳಿದ ಮೂವರಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರವಿವಾರ ಒಟ್ಟು 8 ಮಂದಿ ಸೋಂಕಿನಿಂದ ಗುಣಮುಖ ರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 76,118 ಕ್ಕೇರಿದೆ.
245 ಮಂದಿಗೆ ಲಸಿಕೆ: ಇಂದು ಜಿಲ್ಲೆಯಲ್ಲಿ ಒಟ್ಟು 245 ಮಂದಿ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ್ದು, ಇವರಲ್ಲಿ 24 ಮಂದಿ ಮೊದಲ ಡೋಸ್ ಹಾಗೂ 221 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 19 ಮಂದಿ ಮೊದಲ ಡೋಸ್ ಹಾಗೂ 180 ಮಂದಿ ಎರಡನೇ ಡೋಸ್ ಸ್ವೀಕರಿಸಿದರೆ, 45 ವರ್ಷ ಮೇಲಿನ ಐವರು ಮೊದಲ ಡೋಸ್ ಹಾಗೂ 41 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.