ಉಡುಪಿ: ಮತ್ತೆ ಮೂರಕ್ಕಿಳಿದ ಕೊರೋನ ಸೋಂಕಿತರು
ಉಡುಪಿ, ನ.26: ನಿನ್ನೆ 13ಕ್ಕೇರಿದ್ದ ಜಿಲ್ಲೆಯ ಹೊಸ ಕೊರೋನ ಸೋಂಕಿತರ ಸಂಖ್ಯೆ ಇಂದು ಮತ್ತೆ 3ಕ್ಕಿಳಿದಿದೆ. ದಿನದಲ್ಲಿ 11 ಮಂದಿ ಕೋವಿಡ್ನಿಂದ ಗುಣಮುಖರಾದರೆ, 49 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಇಬ್ಬರು ಪುರುಷರು ಒಬ್ಬ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಇಬ್ಬರು ಉಡುಪಿ ತಾಲೂಕಿನವರಾದರೆ ಒಬ್ಬರು ಕುಂದಾಪುರದವರು. ಪಾಸಿಟಿವ್ ಬಂದ ಮೂವರನ್ನು ಅವರವರ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ಸಹ ಜಿಲ್ಲೆಯಲ್ಲಿ ಕೊರೋನದಿಂದ ಯಾರೂ ಮೃತಪಟ್ಟಿಲ್ಲ.
ಗುರುವಾರ ಸೋಂಕಿನಿಂದ 11 ಮಂದಿ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 76,331ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 1441 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,856ಕ್ಕೇರಿದೆ.
11,639 ಮಂದಿಗೆ ಲಸಿಕೆ: ಇಂದು ನಡೆದ ಮೆಗಾ ಲಸಿಕಾ ಮೇಳದಲ್ಲಿ ಜಿಲ್ಲೆಯಲ್ಲಿ ಒಟ್ಟು 11,639 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 980 ಮಂದಿ ಮೊದಲ ಡೋಸ್ ಹಾಗೂ 10659 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 583 ಮಂದಿ ಮೊದಲ ಡೋಸ್ ಹಾಗೂ 7630 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 397 ಮಂದಿ ಮೊದಲ ಡೋಸ್ ಹಾಗೂ 3025 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಲ್ಲದೇ ಒಬ್ಬ ಆರೋಗ್ಯ ಕಾರ್ಯಕರ್ತ ಹಾಗೂ ಮೂವರು ಮುಂಚೂಣಿ ಕಾರ್ಯಕರ್ತರು ಸಹ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.