ಮಹಡಿಯ ಬಾಲ್ಕನಿಯಿಂದ ಬಿದ್ದು ಮಹಿಳೆ ಮೃತ್ಯು
ಕಾರ್ಕಳ, ನ.27: ವಸತಿಗೃಹದ ಐದನೇ ಮಹಡಿಯ ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುತ್ತಿದ್ದ ಮಹಿಳೆಯೊಬ್ಬರು ಅಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಿಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ನಿಟ್ಟೆ ಕಾಲೇಜಿನ ವಸತಿ ಗೃಹದ ನಿವಾಸಿ ಬಾಲಸುಬ್ರಹ್ಮಣೀ ಎಂಬವರ ಪತ್ನಿ ಕಮಲ ಪ್ರಿಯಾ ಬಿ.(48) ಎಂದು ಗುರುತಿಸಲಾಗಿದೆ. ಇವರು ನ.24ರಂದು ಸಂಜೆ ವೇಳೆ ವಸತಿ ಗೃಹದ 5ನೇ ಮಹಡಿಯಲ್ಲಿದ್ದ ಮನೆಯ ಬಾಲ್ಕನಿಯಲ್ಲಿ ಸ್ಟೂಲ್ ಮೇಲೆ ನಿಂತು ಬಟ್ಟೆ ಒಣಗಿಸುತ್ತಿದ್ದರು.
ಈ ವೇಳೆ ಇವರು ಆಕಸ್ಮಿಕವಾಗಿ ಆಯ ತಪ್ಪಿ ಕೆಳಕ್ಕೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ನ.26ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story