3 ಸಾವಿರ ಮನೆಗಳಿಗೆ ಹಕ್ಕುಪತ್ರ: ಶಾಸಕ ಜೆ.ಆರ್.ಲೋಬೊ
ಮಂಗಳೂರು, ಜೂ.10: ಮಂಗಳೂರು ದಕ್ಷಿಣ ವಿಧಾನ ಸಭಾ ವ್ಯಾಪ್ತಿಯಲ್ಲಿ 94 ಸಿಸಿಯಲ್ಲಿ ಸುಮಾರು 3 ಸಾವಿರ ಮನೆಗಳಿಗೆ ಹಕ್ಕು ಪತ್ರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಕೊಡಿಸುವುದಾಗಿ ಶಾಸಕ ಜೆ.ಆರ್.ಲೋಬೊ ತಿಳಿಸಿದರು.ಶನಿವಾರ ತನ್ನ ಕಚೇರಿಯಲ್ಲಿ 94 ಸಿಸಿಯ ಕುರಿತು ಪ್ರಗತಿ ಪರಿಶೀಲಿಸಿ ಅವರು ಮಾತನಾಡುತ್ತಿದ್ದರು.
ಈಗಾಗಲೇ 30/40 ಅಡಿಯ ಮನೆಯ ಸರ್ವೇ ಕೆಲಸವನ್ನು ಅಧಿಕಾರಿಗಳು ಮಾಡಿದ್ದು, ಈ ಕಾರ್ಯದಲ್ಲಿ ವಿಳಂಬ ಆಗಬಾರದು. ಆಗಸ್ಟ್ ಕೊನೆಯೊಳಗೆ ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಎಲ್ಲ ಕೆಲಸಗಳನ್ನು ಮುಗಿಸುವಂತೆ ಜೆ.ಆರ್.ಲೋಬೊ ಸೂಚಿಸಿದರು.
ಬೆಂಗ್ರೆ, ಬಜಾಲ್, ಪಡೀಲ್ ಮುಂತಾದ ಕಡೆಗಳಲ್ಲಿ ಅಧಿಕಾರಿಗಳು ಸರ್ವೇ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಮುಖ್ಯಮಂತ್ರಿಗಳು ಕೂಡಾ ಆಸಕ್ತಿ ವಹಿಸಿ ತುರ್ತಾಗಿ ಈ ಯೋಜನೆ ಪೂರೈಸುವಂತೆ ಸೂಚಿಸಿದ್ದಾರೆ. ಇದನ್ನು ಅಧಿಕಾರಿಗಳು ಕೂಡಾ ಮನಗಾಣಬೇಕು ಎಂದು ತಿಳಿಸಿದ ಜೆ.ಆರ್.ಲೋಬೊ, ಮನೆಯ ವಿಸ್ತೀರ್ಣ ಹೆಚ್ಚಾಗುತ್ತದೆ ಎಂದು ಕಾಯದೆ ಬಂದ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಸಹಾಯಕ ಕಮಿಷನರ್ ರೇಣುಕಪ್ರಸಾದ್, ತಹಶೀಲ್ದಾರ್ ಮಹಾದೇವಪ್ಪ ಉಪಸ್ಥಿತರಿದ್ದರು.