ಹೊನ್ನಾಳಿ: ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಕೌಟುಂಬಿಕ ಕಲಹ
ಹೊನ್ನಾಳಿ,ಮೇ.26: ಕೌಟುಂಬಿಕ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಪರ್ಯವಸಾನಗೊಂಡಿರುವ ಘಟನೆ ತಾಲೂಕಿನ ಕೋಣನತಲೆ ಗ್ರಾಮದಲ್ಲಿ ಗುರುವಾರ ಮಧ್ಯ ರಾತ್ರಿ ಸಂಭವಿಸಿದೆ.
ಕೋಣನತಲೆ ಗ್ರಾಮದ ಕಮಲಮ್ಮ(60) ಕೊಲೆಯಾದ ಮಹಿಳೆ. ಆಕೆಯ ಪತಿ ಸಿದ್ದಪ್ಪ(65) ಕೊಲೆ ಆರೋಪಿ.
ಗುರುವಾರ ರಾತ್ರಿ ಭಾರೀ ಮಳೆ-ಗಾಳಿಯ ಪರಿಣಾಮ ವಿದ್ಯುತ್ ಸ್ಥಗಿತಗೊಂಡಿದ್ದ ವೇಳೆ ಪತಿ-ಪತ್ನಿ ಮಧ್ಯೆ ಕೌಟುಂಬಿಕ ವಿಷಯಕ್ಕೆ ಜಗಳ ಪ್ರಾರಂಭವಾಗಿದೆ. ಆ ಸಂದರ್ಭದಲ್ಲಿ ಮನೆಯಲ್ಲಿದ್ದ ಹರಿತವಾದ ಆಯುಧದಿಂದ ಸಿದ್ಧಪ್ಪ ಕಮಲಮ್ಮಗೆ ಇರಿದಿದ್ದಾನೆ. ಕತ್ತಲಾಗಿದ್ದರಿಂದ ನಂತರ ಏನಾಯಿತು ಎಂಬುದು ಗೊತ್ತಾಗಿಲ್ಲ. ಆಕೆ ಸಾವಿಗೀಡಾಗಿರುವುದು ಶುಕ್ರವಾರ ಬೆಳಿಗ್ಗೆ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಹೊನ್ನಾಳಿ ಪಿಎಸ್ಐ ಎನ್.ಸಿ. ಕಾಡದೇವರ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಕೊಲೆ ಆರೋಪಿ ಸಿದ್ದಪ್ಪನನ್ನು ಬಂಧಿಸಲಾಗಿದ್ದು, ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story