ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ನಿರಂತರ ಅತ್ಯಾಚಾರ: ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ
ಮೈಸೂರು,ಅ.18: ಅಪ್ರಾಪ್ತ ಬಾಲಕಿಗೆ ಕೊಲೆ ಬೆದರಿಕೆ ಹಾಕಿ ಆಕೆಯ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನಿಗೆ ಮೈಸೂರಿನ ಫೋಕ್ಸೋ ವಿಶೇಷ ನ್ಯಾಯಾಲಯ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ 34 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ವಿರೂಪಾಕ್ಷ (37) ಶಿಕ್ಷೆಗೊಳಗಾದ ವ್ಯಕ್ತಿ. ಎರಡೂವರೆ ವರ್ಷಗಳ ಹಿಂದೆ ಬಾಲಕಿ ಮನೆಯಲ್ಲಿ ಇದ್ದಾಗ ಅಕ್ರಮವಾಗಿ ಪ್ರವೇಶಿಸಿ ಕೊಲೆ ಬೆದರಿಕೆ ಹಾಕಿ ನಿರಂತರ ಅತ್ಯಾಚಾರ ಮಾಡಿದ್ದ ಎನ್ನಲಾಗಿದ್ದು, ಬಾಲಕಿ ಇದರಿಂದ ಗರ್ಭಿಣಿಯಾದ ಬಳಿಕ ಮನೆಯವರಿಗೆ ವಿಷಯ ಗೊತ್ತಾಗಿದೆ. ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿರೂಪಾಕ್ಷನನ್ನು ಬಂಧಿಸಿ ಡಿಎನ್ ಎ ಪರೀಕ್ಷೆ ಮಾಡಿಸಿದ್ದರು. ಇದರಲ್ಲಿ ಮಗುವಿನ ತಂದೆ ವಿರೂಪಾಕ್ಷ ಎಂಬುದು ಸಾಬೀತಾಗಿತ್ತು ಎನ್ನಲಾಗಿದೆ.
ಇದರ ಆಧಾರದ ಮೇಲೆ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ವಿರೋಪಾಕ್ಷನಿಗೆ ಹತ್ತು ವರ್ಷ ಜೈಲುಶಿಕ್ಷೆ, 34ಸಾವಿರ ರೂ.ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಸಿ.ಶಿವರುದ್ರಸ್ವಾಮಿ ವಾದ ಮಂಡಿಸಿದ್ದರು.