ಶಿವಮೊಗ್ಗ: ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಿ ಎಸ್ ಡಿ ಪಿ ಐ ಪ್ರತಿಭಟನೆ
ಶಿವಮೊಗ್ಗ,ಆ.6: ಕೋಮು ಪ್ರಚೋದನಕಾರಿ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಸಚಿವ ಕೆ.ಎಸ್. ಈಶ್ವರಪ್ಪನವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿ ಎದುರು ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಥುರಾ ಮತ್ತು ಕಾಶಿಯಲ್ಲಿರುವ ಮಸೀದಿಗಳು ಗುಲಾಮಗಿರಿಯ ಸಂಕೇತದಂತೆ ಕಾಣುತ್ತಿವೆ. ಮುಂದಿನ ದಿನಗಳಲ್ಲಿ ಕಾಶಿ ಹಾಗೂ ಮಥುರಾದಲ್ಲೂ ಮಸೀದಿಗಳು ದ್ವಂಸ ಆಗಿ ಅಲ್ಲಿಯೂ ಭವ್ಯ ಮಂದಿರಗಳು ನಿರ್ಮಾಣವಾಗಲಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನಿಯ. ಇಂತಹ ಹೇಳಿಕೆಯಿಂದ ಸಮಾಜದಲ್ಲಿ ಶಾಂತಿ ಕದಡುತ್ತದೆ. ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಅಲ್ಲದೆ, ಸಚಿವರು ಮುಂದಿನ ದಿನಗಳಲ್ಲಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ ಅವರ ಮನೆಮುಂದೆ ಹಾಗೂ ಕಛೇರಿ ಎದುರು ಧರಣಿ ಕೂರಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.