ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಯಾವುದೇ ತನಿಖೆಗೂ ಸಿದ್ಧವಾಗಿರಬೇಕು
ಡಿಕೆಶಿ ಮನೆ ಮೇಲಿನ ಸಿಬಿಐ ದಾಳಿ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ
ಬೆಂಗಳೂರು, ಅ. 5: `ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಯಾವುದೇ ರೀತಿ ತನಿಖೆ ನಡೆಸಿದರೂ ಎದುರಿಸಲು ಸಿದ್ಧವಾಗಿರಬೇಕು. ಸತ್ಯಕ್ಕೆ ಜಯ ಸಿಗಲಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲಿನ ಸಿಬಿಐ ದಾಳಿಯ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ಈ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣ ಯಾವುದೇ ರೀತಿ ಪ್ರತಿಕ್ರಿಯೆ ನೀಡಲು ಸಿದ್ಧರಿಲ್ಲ. ಏಕೆಂದರೆ ಇಂಹತ ಸನ್ನಿವೇಶದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳು ಇದು ರಾಜಕೀಯ ಪಿತೂರಿ ಎಂದು ಹೇಳುವುದು ಸಹಜ. ಆದರೆ, ಯಾವುದೇ ಜನಪ್ರತಿನಿಧಿಯೊಬ್ಬ ಅಧಿಕಾರದಲ್ಲಿದ್ದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ' ಎಂದು ಹೇಳಿದರು.
'ದೇಶದ ಕಾನೂನಿನ ವ್ಯವಸ್ಥೆಯಲ್ಲಿ ತಡವಾದರೂ ಸರಿ ಸತ್ಯ ಬಯಲಾಗುತ್ತೆ ಅನ್ನೋ ನಂಬಿಕೆ ಇದೆ. ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಯಾವ ಕಾರಣಕ್ಕೆ ದಾಳಿ ಮಾಡಿದಿವಿ ಎಂದು ಹೇಳಬೇಕು. ಇಲ್ಲ ಕಾಂಗ್ರೆಸ್ ನಾಯಕರು ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಇದರ ಬಗ್ಗೆ ನಮಗೇನೂ ಗೊತ್ತಿಲ್ಲ. ಹೀಗಾಗಿ ನಾನು ಚರ್ಚೆ ಮಾಡುವುದರಿಂದ ಪ್ರಯೋಜನ ಇಲ್ಲ ಎಂಬುದು ನನ್ನ ಅಭಿಪ್ರಾಯ' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.