ಇನ್ನೂ 4 ದಿನ ಧಾರಾಕಾರ ಮಳೆ ಸಾಧ್ಯತೆ: 23 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್'
ಬೆಂಗಳೂರು, ಅ.22: ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇನ್ನೂ 4 ದಿನ ಧಾರಾಕಾರ ಮಳೆಯಾಗಲಿದ್ದು, ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ 23 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಿವಮೊಗ್ಗ, ರಾಮನಗರ, ಕೋಲಾರ, ತುಮಕೂರು, ದಾವಣಗೆರೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಹಾವೇರಿ ಹಾಗೂ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನೈರುತ್ಯ ಮಾನ್ಸೂನ್ ಬಿರುಸುಗೊಂಡಿರುವ ಬೆನ್ನಲ್ಲೆ ಗುರುವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಮಳೆಯಾಗಿದೆ. ಅ.23 ರಿಂದ 26ವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, 27ರವರೆಗೆ ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ಅ.27 ರಂದು ರಾಮನಗರದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ತಿಳಿಸಿದೆ.