ರೋಷನ್ ಬೇಗ್ಗೂ ನಮಗೂ ಯಾವುದೇ ಸಂಬಂಧವಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ರಾಯಚೂರು, ನ.23: ಮಾಜಿ ಶಾಸಕ ರೋಷನ್ ಬೇಗ್ಗೂ ನಮಗೂ ಯಾವುದೇ ಸಂಬಂಧವಿಲ್ಲ. ರೋಷನ್ ಬೇಗ್ ನಮ್ಮ ಪಕ್ಷದಲ್ಲಿಲ್ಲ. ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಐಎಂಎ ಪ್ರಕರಣದಲ್ಲಿ ಮಾಜಿ ಸಚಿವ ಝಮೀರ್ ಅಹ್ಮದ್ ಭಾಗಿ ಆರೋಪವಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಝಮೀರ್ ಅಹ್ಮದ್ ಅವರನ್ನು ಈಗಾಗಲೇ ಕರೆಸಿ ಸಿಐಟಿ ವಿಚಾರಣೆ ಮಾಡಿದೆ. 2-3 ಬಾರಿ ಝಮೀರ್ ವಿಚಾರಣೆ ವೇಳೆಯಲ್ಲಿ ಅವರದೇನೂ ಪಾತ್ರವಿಲ್ಲವೆಂದು ಹೇಳಿದ್ದಾರೆ ಎಂದರು.
ಬರುವ ಮಸ್ಕಿ ಬೈ ಎಲೆಕ್ಷನ್ನಲ್ಲಿ ಜನ ಪ್ರತಾಪಗೌಡ ಪಾಟೀಲ್ಗೆ ತಕ್ಕ ಪಾಠ ಕಲಿಸಲಿದ್ದಾರೆಂಬ ವಿಶ್ವಾವಿದೆ. ಕಾಂಗ್ರೆಸ್ ಪಕ್ಷ ಗೆಲ್ಲುವುದು ನಿಶ್ಚಿತ. ನಾನು ಸಿಎಂ ಆಗಿದ್ದಾಗ ನಡೆದ ಬೈ ಎಲೆಕ್ಷನ್ನಲ್ಲಿ ನಾವು ಗೆದ್ದಿದ್ದೆವು. ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣೆ ಮಾಡುತ್ತಿದೆ ಎಂದರು.
ಕಾಂಗ್ರೆಸ್ನಲ್ಲಿ ಯಾವುದೇ ಗೊಂದಲವಿಲ್ಲ. ನಾಯಕತ್ವದ ಬಗ್ಗೆ ಗೊಂದಲವಿದೆ ಎನ್ನುವುದು ಸುಳ್ಳು. ನಾವು ಒಗ್ಗಟ್ಟಾಗಿದ್ದೇವೆ. ಜೆಡಿಎಸ್ ಬೈ ಎಲೆಕ್ಷನ್ಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತೆ. ಚುನಾವಣೆ ಘೋಷಣೆಯ ಬಳಿಕ ಗೊತ್ತಾಗುತ್ತದೆ. ಅವರು ಹೇಳಿದಂತೆ ಎಂದಾದರೂ ನಡೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.