ಕೇಂದ್ರ ಸರಕಾರದ ಉಚಿತ ಅಕ್ಕಿ ವಿತರಣೆ ನವೆಂಬರ್ ಗೆ ಅಂತ್ಯ
ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತೊಂದು ಆಘಾತ
ಬೆಂಗಳೂರು, ಡಿ.2: ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಉಚಿತವಾಗಿ ಐದು ಕೆಜಿ ಅಕ್ಕಿ, ಒಂದು ಕೆಜಿ ಕಡಲೆಕಾಳು ನೀಡುವ ಕಾರ್ಯಕ್ರಮ ನವೆಂಬರ್ ಅಂತ್ಯಕ್ಕೆ ಕೊನೆಗೊಂಡಿದ್ದು, ಇದರಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದ ಕಟುಂಬಗಳಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ಹೇಳಲಾಗುತ್ತಿವೆ.
ಕೋವಿಡ್ ಲಾಕ್ಡೌನ್ ಪರಿಣಾಮವಾಗಿ ಉದ್ಯೋಗಾವಕಾಶಗಳು ಇಲ್ಲವಾಗಿವೆ. ಇದರಿಂದ ಜನತೆ ಆಹಾರ, ಆರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರ ಜೊತೆಗೆ ಕೇಂದ್ರ ಸರಕಾರದಿಂದ ಬರುತ್ತಿದ್ದ ಅಕ್ಕಿ ನಿಂತರೆ ಜನತೆ ಮತ್ತಷ್ಟು ಸಮಸ್ಯೆಗೆ ಸಿಲುಕಲಿದ್ದಾರೆಂದು ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ಕೋವಿಡ್ನಿಂದಾಗಿ ಶಾಲೆಗಳು ತೆರೆದಿಲ್ಲ. ಇಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು, ಶಿಕ್ಷಕೇತರರು, ವಾಹನ ಚಾಲಕರು ನಿರುದ್ಯೋಗಿಗಳಾಗಿದ್ದಾರೆ. ಸಣ್ಣ ಪ್ರಮಾಣದ ಉದ್ಯಮಗಳು ಬಂದ್ ಆಗಿವೆ. ಹಾಗೂ ಹಲವು ಕಂಪೆನಿಗಳಲ್ಲಿ ಉದ್ಯೋಗಳನ್ನು ಕಡಿತ ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ನೀಡುತ್ತಿದ್ದ 5 ಕೆಜಿ ಅಕ್ಕಿಯನ್ನು ನಿಲ್ಲಿಸುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ಜನತೆಯನ್ನು ನೂಕಿದೆ ಎಂದು ಜನವಾದಿ ಸಂಘಟನೆಯ ಕಾರ್ಯದರ್ಶಿ ಗೌರಮ್ಮ ಆರೋಪಿಸಿದ್ದಾರೆ.
ಕೋವಿಡ್ ಲಾಕ್ಡೌನ್ನಿಂದಾಗಿ ಮಧ್ಯಮ ಹಾಗೂ ಬಡ ಕುಟುಂಬಗಳು ಊಹಿಸಲು ಸಾಧ್ಯವಾಗದಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬಿಪಿಎಲ್ ಹೊಂದಿರುವ ಕುಟುಂಬಕ್ಕೆ ಪ್ರತಿ ತಿಂಗಳು 7500 ರೂ. ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿದ್ದೆವು. ಇದರ ಬದಲಿಗೆ ಕೇಂದ್ರ ಸರಕಾರ ಉಚಿತ 5 ಕೆಜಿ ಅಕ್ಕಿಯನ್ನು ನಿಲ್ಲಿಸುವ ಮೂಲಕ ಕನಿಷ್ಠ ಸೌಲಭ್ಯವನ್ನೂ ಕಿತ್ತುಕೊಂಡಿದೆ. ಸರಕಾರದ ಅಧಿಕಾರಿಗಳ ಪ್ರಕಾರವೇ ಸರಕಾರದ ಗೋದಾಮಿಗಳು ಧಾನ್ಯಗಳು ಕೊಳೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಡವರಿಗೆ ನೀಡುತ್ತಿದ್ದ ಅಕ್ಕಿಯನ್ನು ನಿಲ್ಲಿಸಿರುವುದು ಘೋರ ಅಪರಾಧವಾಗಿದೆ. ಕೇಂದ್ರ ಸರಕಾರದ ಉಚಿತ ಅಕ್ಕಿ ವಿತರಣೆಯನ್ನು ಕನಿಷ್ಠ ಆರು ತಿಂಗಳವರೆಗೆ ವಿಸ್ತರಿಸಬೇಕೆಂದು ಮಹಿಳಾ ಸಂಘಟನೆಗಳ ಪರವಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದೇನೆಂದು ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರ ಜನತೆಯ ಸಮಸ್ಯೆಗಳನ್ನು ಪರಿಹರಿಸುವುದರ ಕಡೆಗೆ ಗಮನ ಕೊಡುವುದನ್ನು ಬಿಟ್ಟು, ಅಸ್ತಿತ್ವದಲ್ಲೇ ಇಲ್ಲದ ಲವ್ಜಿಹಾದ್ ಕುರಿತು ಹುಸಿ ಸುಳ್ಳುಗಳನ್ನು ಬಿತ್ತುವಲ್ಲಿ ನಿರತವಾಗಿದೆ. ಈಗ ಕೇಂದ್ರ ಸರಕಾರ ಉಚಿತ ಅಕ್ಕಿ ನೀಡುವುದನ್ನು ನಿಲ್ಲಿಸಿದೆ. ಈಗ ಮುಂದೆ ಬಡ ಹಾಗೂ ನಿರುದ್ಯೋಗ ಕುಟುಂಬಗಳಿಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಸರಕಾರ ಏನು ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಆಹಾರ ಸಚಿವ ಗೋಪಾಲಯ್ಯರನ್ನು ಭೇಟಿಯಾಗಿ ಚರ್ಚಿಸಲಾಗುವುದು.
-ಗೌರಮ್ಮ, ಕಾರ್ಯದರ್ಶಿ, ಜನವಾದಿ ಮಹಿಳಾ ಸಂಘಟನೆ