ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಗೊಳಿಸುತ್ತೇವೆ: ಡಿಸಿಎಂ ಗೋವಿಂದ ಕಾರಜೋಳ
ಬಾಗಲಕೋಟೆ, ಜ.12: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ದೂರದೃಷ್ಟಿಯ ಫಲವಾಗಿ ಮಾದರಿಯಾದ ಪಂಚಾಯತ್ ರಾಜ್ ವ್ಯವಸ್ಥೆ ನಮ್ಮ ರಾಜ್ಯದಲ್ಲಿತ್ತು. ಅದೇ ರೀತಿಯಾಗಿ ಯಾವುದೇ ರೀತಿಯ ಅನುದಾನವಿಲ್ಲದ ತಾಪಂ ವ್ಯವಸ್ಥೆಯನ್ನು ರದ್ದುಗೊಳಿಸುವ ಮೂಲಕ ಮಾದರಿಯಾದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಬುಧವಾರ ಬಾಗಲಕೋಟೆ ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಜನ ಸೇವಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯತ್ ರಾಜ್ನಲ್ಲಿ ಮೊದಲು ಎರಡು ಹಂತದ ವ್ಯವಸ್ಥೆಯಿತ್ತು. ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್ ವ್ಯವಸ್ಥೆ ಜಾರಿಯಲ್ಲಿದ್ದಾಗ ಗ್ರಾಮೀಣ ಅಭಿವೃದ್ದಿಗೆ ಬಹಳಷ್ಟು ಅನುದಾನ ಬಿಡುಗಡೆಯಾಗುತ್ತಿತ್ತು. ರಾಮಕೃಷ್ಣ ಹೆಗಡೆ ಅವರು ಈ ವ್ಯವಸ್ಥೆಯನ್ನು ಇಡೀ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೊಳಿಸಿದಾಗ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕೇಂದ್ರದ ತಂಡ ಕಳುಹಿಸಿ ಅಧ್ಯಯನ ಮಾಡಿಸಿದ್ದರು. ಇಂಥ ವ್ಯವಸ್ಥೆಯನ್ನು ವೀರಪ್ಪ ಮೊಯ್ಲಿ ಹಾಳು ಮಾಡಿದರು ಎಂದು ಆರೋಪಿಸಿದ್ದಾರೆ.
ಪಂಚಾಯತ್ ವ್ಯವಸ್ಥೆ ಇಂದು ಮೂರು ಹಂತದಲ್ಲಿದೆ. ತಾಲೂಕು ಪಂಚಾಯತ್ಗೆ ಯಾವುದೇ ರೀತಿಯ ಅನುದಾನವಿಲ್ಲ. ಆದರೂ ತಾ.ಪಂ ವ್ಯವಸ್ಥೆ ಜಾರಿಯಲ್ಲಿದ್ದು, ಇದರಿಂದ ಅಭಿವೃದ್ದಿಗಿಂತ ಹೊರೆಯೇ ಹೆಚ್ಚು. ಹೀಗಾಗಿ ತಾ.ಪಂ. ವ್ಯವಸ್ಥೆ ರದ್ದುಗೊಳಿಸಿ, ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆದಿದ್ದು, ಶೀಘ್ರವೇ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.