ಮಸಿ ಬಳಿಯುವುದು ಕನ್ನಡದ ಸಂಸ್ಕೃತಿಯಲ್ಲ: ಸಚಿವ ಅರವಿಂದ ಲಿಂಬಾವಳಿ
ಬೆಂಗಳೂರು, ಫೆ.4: ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಮಸಿ ಬಳಿಯವುದು ಕನ್ನಡದ ಸಂಸ್ಕೃತಿ ಅಲ್ಲ ಎಂದು ತಿಳಿಸಿದ್ದಾರೆ.
''ಇದು ದುರಾದೃಷ್ಟಕರ ಘಟನೆ, ತಾತ್ವಿಕ ಬಿನ್ನಾಭಿಪ್ರಾಯಗಳು ದೈಹಿಕ ಹಲ್ಲೆ, ದೈಹಿಕ ಹಿಂಸೆಯ ರೂಪ ತಾಳಬಾರದು. ಇಂತಹ ಕೃತ್ಯಗಳನ್ನು ನಾನು ಖಂಡಿಸುತ್ತೇನೆ. ಮಸಿ ಬಳಿಯವುದು ಕನ್ನಡದ ಸಂಸ್ಕೃತಿ ಅಲ್ಲ'' ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆನ್ನಲಾದ ಭಗವಾನ್ ಅವರ ಮುಖಕ್ಕೆ ಬಿಜೆಪಿ ಕಾರ್ಯಕರ್ತೆ, ವಕೀಲೆ ಮೀರಾ ರಾಘವೇಂದ್ರ ಎಂಬವರು ಇಂದು ಮದ್ಯಾಹ್ನ ನಗರದ 2ನೇ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಮಸಿ ಬಳಿದಿದ್ದರು.
ಭಗವಾನ್ ಅವರ ವಿರುದ್ಧ ಹಿಂದೂ ಧರ್ಮದ ಬಗ್ಗೆ ನೀಡಿದ ಹೇಳಿಕೆ ಸಂಬಂಧ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ಭಗವಾನ್ ರವರು ಇಂದು ಕೋರ್ಟ್ಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಬಳಿಕ ಅವರು ಕೋರ್ಟ್ನಿಂದ ಹೊರಗೆ ಬಂದಾಗ ಮೀರಾ ರಾಘವೇಂದ್ರ ಮುಖಕ್ಕೆ ಮಸಿ ಬಳಿದಿದ್ದಾರೆ.
ಈ ಬಗ್ಗೆ ಸ್ವತಃ ಮೀರಾ ರಾಘವೇಂದ್ರ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿದ್ದು, ''ಬುದ್ಧಿಜೀವಿ, ಧರ್ಮ ವಿರೋಧಿ ಫ್ರೊ.ಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ. ಜೈಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
ಘಟನೆ ಸಂಬಂಧ ಭಗವಾನ್ ಅವರು ಮೀರಾ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.