ಕರ್ನಾಟಕ ಬಜೆಟ್-2021: ಯಾವ ಕ್ಷೇತ್ರಕ್ಕೆ ಏನೇನು ಕೊಡುಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ | Vartha Bharati- ವಾರ್ತಾ ಭಾರತಿ

--

ಕರ್ನಾಟಕ ಬಜೆಟ್-2021: ಯಾವ ಕ್ಷೇತ್ರಕ್ಕೆ ಏನೇನು ಕೊಡುಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು, ಮಾ.8: ಕೊರೋನ ಸಂಕಷ್ಟದಿಂದಾಗಿ ಸಂಪನ್ಮೂಲ ಕ್ರೋಢೀಕರಣದಲ್ಲಿ ಖೋತಾ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯ ನಡುವೆ ಇಂದು (ಮಾ.8) ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2021-22ನೆ ಸಾಲಿನ ಆಯವ್ಯಯ ಮಂಡಿಸಿದ್ದಾರೆ.

ವಿಶೇಷ ಸಂಪುಟ ಸಭೆ ಬಳಿಕ ಸಿಎಂ ಯಡಿಯೂರಪ್ಪ 12 ಗಂಟೆಗೆ ವಿಧಾನಸಭೆಯಲ್ಲಿ 2021-22ನೆ ಸಾಲಿನ ಬಜೆಟ್ ಮಂಡಿಸಲು ಆರಂಭಿಸಿದರು. ಸುಮಾರು ಎರಡು ಗಂಟೆಗಳ ಕಾಲ ಅವರು ಬಜೆಟ್ ಮಂಡಿಸಿದರು. ಎಂ ಯಡಿಯೂರಪ್ಪ ಮಂಡಿಸಿದ ಬಜೆಟ್ ನ ಸಂಪೂರ್ಣ ವಿವರ ಇಲ್ಲಿದೆ.

ವಲಯವಾರು ಬಜೆಟ್ ಮಂಡನೆ

ಶಿಕ್ಷಣ

► ಆಯ್ದ 50 ಕರ್ನಾಟಕ ಪಬ್ಲಿಕ್ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ

► ಆಯ್ದ 100 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯದೊಡನೆ ವೃತ್ತಿ ತರಬೇತಿಯನ್ನು ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ನೀಡಲಾಗುವುದು.

► ಪ್ರೌಢಶಾಲೆಗಳ ಹಾಗೂ ಪದವಿಪೂರ್ವ ಕಾಲೇಜುಗಳ ಮೂಲಭೂತ ಸೌಕರ್ಯಕ್ಕೆ 150 ಕೋಟಿ ರೂ. ಮೀಸಲು. ಜತೆಗೆ, ಶಾಲೆಗಳಿಗೆ ಪೀಠೋಪಕರಣ ಮತ್ತು ಕಲಿಕಾ ಸಾಮಗ್ರಿ ಒದಗಿಸಲು 50 ಕೋಟಿ ರೂ. ಅನುದಾನ.

► ಎಲ್ಲ ಸರಕಾರಿ ಪ್ರೌಢಶಾಲೆಗಳಿಗೂ ಕಂಪ್ಯೂಟರ್ ಲ್ಯಾಬ್ ಸೌಲಭ್ಯ ವಿಸ್ತರಣೆ.

► ಗುರು ಚೇತನ ಮತ್ತು ಓದು ಕರ್ನಾಟಕ ಕಾರ್ಯಕ್ರಮದಡಿ ಶಿಕ್ಷಕರ ತರಬೇತಿ, ಆಂಗ್ಲಮಾಧ್ಯಮ ಶಿಕ್ಷಕರಿಗೆ ಭಾಷಾ ತರಬೇತಿ ಹಾಗೂ ಗಣಿತ, ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲು 2021-22ನೇ ಸಾಲಿನಲ್ಲಿ 5 ಕೋಟಿ ರೂ. ಅನುದಾನ.

► ರಾಜ್ಯದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕಲಿತ ಶಾಲೆಗಳ ಸಮಗ್ರ ಅಭಿವೃದ್ಧಿ.

► ಡಿಜಿಟಲ್ ಕಲಿಕೆಗೆ ಅನುವಾಗುವಂತೆ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ 50 ಕೋಟಿ ರೂ.ವೆಚ್ಚದಲ್ಲಿ ‘ಸ್ಮಾರ್ಟ್ ಕ್ಲಾಸ್ ರೂಮ್’ಗಳ ಪ್ರಗತಿ.

► ಕೇಂದ್ರ ಮತ್ತು ರಾಜ್ಯ ಆಡಳಿತ ಸೇವೆಗಳು, ಬ್ಯಾಂಕಿಂಗ್, ರೈಲ್ವೆ ಇತ್ಯಾದಿ ಉದ್ಯೋಗಗಳಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರ ಸೇರ್ಪಡೆಯನ್ನು ಉತ್ತೇಜಿಸಲು “ಸಾಮರ್ಥ್ಯ-ಸಾರಥ್ಯ” ಕಾರ್ಯಕ್ರಮ. 5 ಲಕ್ಷ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ 5 ಕೋಟಿ ರೂ.

► ಜಾಗತಿಕ ಮಟ್ಟದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಶೈಕ್ಷಣಿಕ ನಾಯಕತ್ವ ಕಾರ್ಯಕ್ರಮ ಜಾರಿ.

► ರಾಜ್ಯದ ಆಯ್ದ ಮಹಾನಗರಪಾಲಿಕೆ ಮತ್ತು ನಗರರಸಭೆಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ಕಾಲೇಜು ಪ್ರಾರಂಭ.

► ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತು ಅರಿವು ಮೂಡಿಸಲು ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಕಾರ್ಯಾಗಾರ.

ಆರೋಗ್ಯ-ಮಹಿಳೆ-ಮಕ್ಕಳು

► ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳಲ್ಲಿ 25 ಹಾಸಿಗೆ ಸಾಮರ್ಥ್ಯದ ಹಾಗೂ 100 ತಾಲೂಕು ಆಸ್ಪತ್ರೆಗಳಲ್ಲಿ 6 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕಗಳನ್ನು 60 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತಗೊಳಿಸಲು ಕ್ರಮ.

► ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಕ್ರಮ.

► 2 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪ್ರಾದೇಶಿಕ ಆಹಾರ ಸುರಕ್ಷತಾ ಪ್ರಯೋಗಾಲಯಗಳ ಉನ್ನತೀಕರಣ.

► ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಘಟಕ ಪ್ರಾರಂಭ.

► ನವಜಾತ ಶಿಶುಗಳಲ್ಲಿ ಅನುವಂಶೀಯ ಮೆಟಾಬಾಲಿಕ್ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪನೆ.

► ರಾಜ್ಯದ ನಾಲ್ಕು ವಿಭಾಗಗಳಲ್ಲಿ ಒಟ್ಟು 2.5 ಕೋಟಿ ರೂ.ಗಳ ವೆಚ್ಚದಲ್ಲಿ “ತಾಯಂದಿರ ಎದೆಹಾಲಿನ ಬ್ಯಾಂಕ್” ಸ್ಥಾಪನೆ.

► ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡುವುದನ್ನು ಉತ್ತೇಜಿಸಲು 10 ಕೋಟಿ ರೂ. ವೆಚ್ಚದಲ್ಲಿ “ಚಿಗುರು” ಕಾರ್ಯಕ್ರಮಕ್ಕೆ ಚಾಲನೆ.

► ಟೆಲಿ-ಐಸಿಯು ಬಲಪಡಿಸಲು 2 ಕೋಟಿ ರೂ. ಅನುದಾನ.

► ಶಿವಮೊಗ್ಗ ಜಿಲ್ಲೆಯಲ್ಲಿರುವ ಆಯುರ್ವೇದ ಕಾಲೇಜನ್ನು ಆಯುಷ್ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ.

► ಅಪೌಷ್ಟಿಕತೆಯಿಂದ ತಾಯಿ ಮತ್ತು ಮಗುವನ್ನು ರಕ್ಷಿಸಲು 5 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ವೈದ್ಯ ಪದ್ಧತಿ ಆಧರಿಸಿದ “ಪೋಷಣೆ ಮತ್ತು ಜೀವನೋಪಾಯ” ಕಾರ್ಯಕ್ರಮ ಜಾರಿ.

► ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು 5 ಕೋಟಿ ರೂ. ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗ ಪ್ರಾರಂಭ.

► ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಕೇಂದ್ರ ಪ್ರಾರಂಭ.

► ಶಿವಮೊಗ್ಗ ಮತ್ತು ಮೈಸೂರಿನಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಪ್ರಾರಂಭ.

► ಮಹಿಳೆಯರಲ್ಲಿ ಕ್ಯಾನ್ಸರ್ ರೋಗ ಪತ್ತೆ ಹಚ್ಚಲು 11 ಕೋಟಿ ರೂ.ಗಳ ವೆಚ್ಚದಲ್ಲಿ ಮೂರು ಹೊಸ ಸುಸಜ್ಜಿತ ಸಂಚಾರಿ ಪ್ರಯೋಗಾಲಯ ಪ್ರಾರಂಭ.

► ದಾವಣಗೆರೆಯಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರ ಪ್ರಾರಂಭಿಸಲು ಕ್ರಮ.

► ಕಲಬುರ್ಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಟ್ಟಗಾಯಗಳ ಚಿಕಿತ್ಸಾಕೇಂದ್ರ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗ ಪ್ರಾರಂಭ.

► ಚಿತ್ರದುರ್ಗ ಜಿಲ್ಲೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭ.

► ಹಾಸನ ಮತ್ತು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನಿಂದ 100 ಸ್ನಾತಕೋತ್ತರ ಸೀಟುಗಳ ಹೆಚ್ಚಳ.

► ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯನ್ನು 75 ಕೋಟಿ ರೂ.ಗಳ ವೆಚ್ಚದಲ್ಲಿ ಮಾನಸಿಕ ನರರೋಗಿಗಳ ಸುಸಜ್ಜಿತ ಚಿಕಿತ್ಸಾ ಸಂಸ್ಥೆಯನ್ನಾಗಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸಲು ಕ್ರಮ. ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ನಿಗದಿ.

► ಬುದ್ಧಿಮಾಂದ್ಯರ ಆರೈಕೆ ಮಾಡಲು ಅನುವಾಗುವಂತೆ ಶೇ.75 ಕ್ಕಿಂತ ಹೆಚ್ಚಿನ ಮನೋವೈಕಲ್ಯತೆ ಹೊಂದಿದವರಿಗೆ ನೀಡುವ ಮಾಸಾಶನ 2000 ರೂ.ಗಳಿಗೆ ಹೆಚ್ಚಳ.

► ಹುಟ್ಟಿನಿಂದಲೇ ಶ್ರವಣದೋಷವುಳ್ಳ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ತಾಯಂದಿರ ಸಹಿತ ವಾಕ್ ತರಬೇತಿ.

► ಸರಕಾರದ ಬ್ರೈಲ್ ಮುದ್ರಣಾಲಯದಲ್ಲಿ “ಸುಶ್ರಾವ್ಯ” ಡಿಜಿಟಲ್ ಪುಸ್ತಕಗಳ ಬ್ಯಾಂಕ್ ಸ್ಥಾಪನೆ.

► ವಿಶೇಷ ಶಾಲೆಗಳಿಗೆ ಡಿಜಿಟಲ್ ಪುಸ್ತಕ ಸರಬರಾಜಿಗೆ ಕ್ರಮ.

► 2021-22ನೇ ಸಾಲಿನಲ್ಲಿ ಮಕ್ಕಳ ಉದ್ದೇಶಿತ ಯೋಜನೆಗಳಿಗೆ 37,527 ಕೋಟಿ ರೂ. ಅನುದಾನ.

ಸಮಾಜ ಕಲ್ಯಾಣ

► 2021-22ನೇ ಸಾಲಿನ ಆಯವ್ಯಯದಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳಡಿ ಒಟ್ಟಾರೆ 26,005 ಕೋಟಿ ರೂ. ಹಂಚಿಕೆ.

► ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಕೋಟಿ ರೂ. ವೆಚ್ಚದಲ್ಲಿ 50 ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರಾರಂಭ. 5 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ.

► ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ತರಬೇತಿ ನೀಡಲು 5 ಕೋಟಿ ರೂ. ವೆಚ್ಚದಲ್ಲಿ ಪ್ರತಿ ವಿಭಾಗದಲ್ಲಿ ತಲಾ ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಅದ್ವಿತೀಯ ಕ್ರೀಡಾ ಶಾಲೆಯೆಂದು ಉನ್ನತೀಕರಿಸಲು ಕ್ರಮ.

► ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ಹಾಲಿ ಜಾರಿಯಲ್ಲಿರುವ ಶೇ.4ರಷ್ಟು ಬಡ್ಡಿ ಸಹಾಯಧನ ಯೋಜನೆ ಮಳಿಗೆ/ಡೀಲರ್‍ಶಿಪ್/ಫ್ರಾಂಚೈಸಿ ಮತ್ತು ಹೋಟೆಲ್ ಉದ್ಯಮಗಳನ್ನು ಪ್ರಾರಂಭಿಸಲು ವಿಸ್ತರಣೆ. ಗರಿಷ್ಠ 1 ಕೋಟಿ ರೂ. ವರೆಗೆ ಸಾಲಕ್ಕೆ ಅವಕಾಶ.

► ಮ್ಯಾನ್ಯುಯಲ್ ಸ್ಕ್ಯಾವೆಂಜರುಗಳ ಪುನರ್ವಸತಿಗೆ, ಸಂಘಗಳನ್ನು ರಚಿಸಿ, ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳಿಗೆ ಶೇ.75ರಷ್ಟು ಸಹಾಯಧನ ಒದಗಿಸಲು ಕ್ರಮ. ಇದಕ್ಕಾಗಿ 2 ಕೋಟಿ ರೂ. ಅನುದಾನ.

► ನಿಪ್ಪಾಣಿಯಲ್ಲಿ “ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್” ಮತ್ತು ಚಿತ್ರದುರ್ಗದಲ್ಲಿ ಕೇಂದ್ರ ಪಾದರಕ್ಷಾ ತರಬೇತಿ ಸಂಸ್ಥೆಯ ವಿಸ್ತರಣಾ ಕೇಂದ್ರ ಪ್ರಾರಂಭ.

► ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳಿಗೆ “ವಾಲ್ಮೀಕಿ ಆಶ್ರಮ ಶಾಲೆ” ಎಂದು ಮರು ನಾಮಕರಣ.

► ಡಾ.ಬಿ.ಆರ್.ಅಂಬೇರ್ ಭೇಟಿ ನೀಡಿದ್ದ ಹಾಸನ ನಗರದ ಎ.ಕೆ.ಬೋರ್ಡಿಂಗ್ ಹೋಮ್ ಸ್ಥಳದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ಭವನ ನಿರ್ಮಾಣ.

► ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದಳಿದ ವರ್ಗಗಳ ವಿವಿಧ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 500 ಕೋಟಿ ರೂ.ಅನುದಾನ

► ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ

► ಒಕ್ಕಲಿಗ ಸಮುದಾಯದ ಹೊಸ ನಿಗಮ ಸ್ಥಾಪನೆ. 500 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮಗಳ ಅನುಷ್ಠಾನ.

► ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಚಟುವಟಿಕೆಗಳಿಗೆ 50 ಕೋಟಿ ರೂ.

► ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 150 ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕೆ ಕ್ರಮ.

► ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಸ್ವಂತ ಕಟ್ಟಡ ಹೊಂದಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಸಂಖ್ಯಾಬಲ ಶೇ.5 ರಷ್ಟು ಹೆಚ್ಚಳ. 5000 ವಿದ್ಯಾರ್ಥಿಗಳಿಗೆ ಅನುಕೂಲ. ಇದಕ್ಕಾಗಿ 10 ಕೋಟಿ ರೂ. ಅನುದಾನ.

► ಗಂಗಾ ಕಲ್ಯಾಣ ಯೋಜನೆಯ ಪಾರದರ್ಶಕ, ಕಾಲಮಿತಿಯ ಅನುಷ್ಠಾನಕ್ಕಾಗಿ, “ಅನುಷ್ಠಾನದ ವಿವೇಚನೆ ಫಲಾನುಭವಿಯ ಕೈಗೆ” ಎಂಬ ನೂತನ ವಿಧಾನ ಜಾರಿಗೆ.

► ಅಲ್ಪಸಂಖ್ಯಾತರ ಏಳಿಗೆಗಾಗಿ 1,500 ಕೋಟಿ ರೂ. ಮೀಸಲು.

► 200 ಕೋಟಿ ರೂ.ಗಳ ವೆಚ್ಚದಲ್ಲಿ ಕ್ರಿಶ್ಚಿಯನ್ ಸಮುದಾಯದ ವಿವಿಧ ಅಭಿವೃದ್ಧಿ.

► ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಾದರಿ ಶಾಲೆ, ಕಾಲೇಜುಗಳಲ್ಲಿ ‘ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ’ ಅನುಷ್ಠಾನ.

► ಶ್ರವಣಬೆಳಗೊಳ ಮತ್ತು ಇನ್ನಿತರೆ ಜೈನ ಪುಣ್ಯ ಕ್ಷೇತ್ರಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಕ್ರಮ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 20 ಕೋಟಿ ರೂ. ಅನುದಾನ.

ವಸತಿ-ಕಾರ್ಮಿಕ

► ವಿವಿಧ ವಸತಿ ಯೋಜನೆಗಳಡಿ ಅನುಮೋದನೆಗೊಂಡು, ಪ್ರಾರಂಭವಾಗದೇ ಇರುವ ಮನೆಗಳನ್ನು ಪೂರ್ಣಗೊಳಿಸಲು ಸರಕಾರದ ಆದ್ಯತೆ. ಪ್ರಗತಿಯಲ್ಲಿರುವ 9.74 ಲಕ್ಷ ಮನೆಗಳಿಗೆ ಮೂರು ವರ್ಷಗಳಲ್ಲಿ 10,194 ಕೋಟಿ ರೂ.ಗಳನ್ನು ಒದಗಿಸಲು ಅನುಮೋದನೆ.

► ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗಾಗಿ ಹೆಚ್ಚುವರಿಯಾಗಿ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶು ಪಾಲನಾ ಕೇಂದ್ರ ಸ್ಥಾಪನೆ.

► ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗಾಗಿ 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರಗಳ ಪ್ರಾರಂಭ.

► ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 11 ಜಿಲ್ಲೆಗಳಲ್ಲಿ 17 ತಾತ್ಕಾಲಿಕ ವಸತಿ ಗೃಹಗಳ ಸೌಲಭ್ಯ.

► ಖಾಸಗಿ ಕಂಪೆನಿಗಳ ಸಹಯೋಗದೊಂದಿಗೆ 4,636 ಕೋಟಿ ರೂ.ಗಳ ಹೂಡಿಕೆಯೊಂದಿಗೆ 150 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಣಕ್ಕೆ ಕ್ರಮ.

► ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೊಸದಾಗಿ 23 ಅಲ್ಪಾವಧಿ ಹಾಗೂ 11 ದೀರ್ಘಾವಧಿ ವೃತ್ತಿಪರ ಕೋರ್ಸು ಪ್ರಾರಂಭ.

► ಕೇಂದ್ರ ಸರಕಾರದ ಶಿಶಿಕ್ಷು ತರಬೇತಿ ಯೋಜನೆಯಡಿ ಪ್ರತಿ ತಿಂಗಳು ನೀಡುವ 1,500 ರೂ. ಶಿಷ್ಯ ವೇತನದೊಂದಿಗೆ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ 1,500 ರೂ. ನೀಡಲು ಕ್ರಮ. ಈ ಯೋಜನೆಯಿಂದ 10 ಸಾವಿರ ಶಿಶಿಕ್ಷುಗಳಿಗೆ ಅನುಕೂಲ. 18 ಕೋಟಿ ರೂ. ಅನುದಾನ.

► ಗ್ರಾಮೀಣ ಯುವತಿಯರಿಗೆ ಸರಕಾರಿ ಸಂಸ್ಥೆಗಳಲ್ಲಿ ಮೃದು ಕೌಶಲ್ಯ, ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿ ನೀಡಲು ಕ್ರಮ.

► ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 2021-22ನೇ ಸಾಲಿನಲ್ಲಿ ಒಟ್ಟಾರೆಯಾಗಿ 62,150 ಕೋಟಿ ರೂ. ಅನುದಾನ.

‘9.74 ಲಕ್ಷ ಮನೆ ಪೂರ್ಣಗೊಳಿಸುವ ಗುರಿ’

ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 9.74 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು 10,194 ಕೋಟಿ ರೂ. ಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದ ವಿವಿಧ ವಸತಿ ಯೋಜನೆಗಳಲ್ಲಿ ಹಲವು ವರ್ಷಗಳಿಂದ ಅನುಮೋದನೆಗೊಂಡು ಪ್ರಾರಂಭವಾಗದೆ ಇರುವ ಮನೆಗಳನ್ನು ಪ್ರಾರಂಭಿಸಿ ಪೂರ್ಣಗೊಳಿಸಲು ಒತ್ತು ನೀಡಲಾಗಿದೆ. ಹೀಗಾಗಿ ಮುಂದಿನ ಮೂರು ವರ್ಷಗಳಲ್ಲಿ ಈ ಮೊತ್ತವನ್ನು ಮೀಸಲಿಡಲಾಗುವುದು ಎಂದು ಅವರು ಬಜೆಟ್‍ನಲ್ಲಿ ಉಲ್ಲೇಖಿಸಿದ್ದಾರೆ.

‘ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ’

ಒಕ್ಕಲಿಗ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸಿ, 500 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ನಿಗಮ ಸ್ಥಾಪಿಸಲಾಗಿದೆ.

ಅಲ್ಪಸಂಖ್ಯಾತರ ಅಭಿವೃದ್ಧಿಗೆ 1500 ಕೋಟಿ ರೂ.: ಬಿಎಸ್‍ವೈ

ಬೆಂಗಳೂರು, ಮಾ.8: ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ 1500 ಕೋಟಿ ರೂ. ಮೀಸಲಿಟ್ಟಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.

2020-21ನೇ ಸಾಲಿನಲ್ಲಿ 400 ಸರಕಾರಿ ಉರ್ದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಲು ಸರಕಾರಿ ಆದೇಶ ಹೊರಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಈ ಚಟುವಟಿಕೆಯನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧೀನದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಾದರಿ ಶಾಲಾ–ಕಾಲೇಜುಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ ಅನುಷ್ಠಾನಗೊಳಿಸಿ, ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಎಲ್ಲಾ ವಿಷಯಗಳಲ್ಲಿ ಬೋಧನಾ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.

ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂ.

ರಾಜ್ಯದಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಚರ್ಚ್ ಗಳ ನವೀಕರಣ, ದುರಸ್ತಿ, ಸಮುದಾಯ ಭವನ, ಕಟ್ಟಡ ನಿರ್ಮಾಣ, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವು ಸೇರಿದಂತೆ, ಇನ್ನಿತರೆ ಕಾರ್ಯಕ್ರಮಗಳನ್ನು ಜಾರಿ ಮಾಡಲು 200 ಕೋಟಿ ರೂ. ಮೀಸಲಿಟ್ಟಿರುವುದಾಗಿ ಯಡಿಯೂರಪ್ಪ ಪ್ರಕಟಿಸಿದರು.

ಕೃಷಿ ಮತ್ತು ಪೂರಕ ಚಟುವಟಿಕೆಗೆ 31,028 ಕೋಟಿ ರೂ.ಅನುದಾನ

ಸಾವಯವ ಕೃಷಿ ಉತ್ತೇಜನಕ್ಕೆ 500 ಕೋಟಿ ರೂ., ವಿಜಯಪುರ ಜಿಲ್ಲೆ ಇಟ್ಟಂಗಿಹಾಳದಲ್ಲಿ ಫುಡ್ ಪಾರ್ಕ್ ಸ್ಥಾಪನೆ, ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗಿರುವ ಮೀಸಲಾತಿ ಶೇ.50ಕ್ಕೆ ಹೆಚ್ಚಳ ಸೇರಿದಂತೆ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 2021-22ನೇ ಸಾಲಿನ ಆಯವ್ಯಯದಲ್ಲಿ ಒಟ್ಟಾರೆ 31,028 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಕೃಷಿಕರ ಆದಾಯವನ್ನು 2023ರ ವೇಳೆಗೆ ದ್ವಿಗುಣಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರದೊಂದಿಗೆ ಕೈಜೋಡಿಸಿ ಹಲವು ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಗುಣಮಟ್ಟದ ಬಿತ್ತನೆ ಬೀಜದ ಲಭ್ಯತೆ, ಬೆಳೆ ನಿರ್ವಹಣೆ, ಕೊಯ್ಲೋತ್ತರ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ, ಮಾರಾಟ ಹೀಗೆ ಪ್ರತಿ ಹಂತದಲ್ಲೂ ರೈತರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಿ ಬೆಂಬಲ ನೀಡಲು ಸರಕಾರ ಬದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಕೃಷಿ ಯೋಜನೆಗಳು

► ಕೃಷಿ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್ ಗಳಿಗೆ ನೀಡುತ್ತಿದ್ದ ಸಹಾಯಧನ 25-45 ಪಿಟಿಒ ಎಚ್‍ಪಿ ಟ್ರ್ಯಾಕ್ಟರ್ ಗಳಿಗೆ ವಿಸ್ತರಣೆ.

► ರಾಷ್ಟ್ರೀಯ ಇ-ಮಾರುಕಟ್ಟೆ ಪ್ರೈವೇಟ್ ಲಿ. ಮೂಲಕ ಸಾವಯವ ಮತ್ತು ಸಿರಿಧಾನ್ಯಗಳಿಗೆ ವೈಜ್ಞಾನಿಕ ಮಾರಾಟಕ್ಕೆ ಅವಕಾಶ.

► ಮುಂದಿನ 5 ವರ್ಷಗಳಲ್ಲಿ 75 ಕೋಟಿ ರೂ.ವೆಚ್ಚದಲ್ಲಿ ರಾಜ್ಯದ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ಕಾರ್ಯಕ್ರಮಕ್ಕೆ 10 ಕೋಟಿ ರೂ.ಅನುದಾನ.

► ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಆಹಾರ ಸಂಸ್ಕರಣೆ ಹಾಗೂ ಕೊಯ್ಲೋತ್ತರ ನಿರ್ವಹಣಾ ಘಟಕೆಗಳಿಗೆ ನೀಡುವ ಶೇ.35ರಷ್ಟು ಸಹಾಯಧನವನ್ನು ಶೇ.50ಕ್ಕೆ ಹೆಚ್ಚಿಸಲು ರಾಜ್ಯ ಸರಕಾರದಿಂದ ಶೇ.15ರಷ್ಟು(50ಕೋಟಿ ರೂ.) ಸಹಾಯಧನ.

► ಕೊಪ್ಪಳ ಜಿಲ್ಲೆಯ ಸಿರಿವಾರ ಗ್ರಾಮದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ.

► ಹೊಸ ತಂತ್ರಜ್ಞಾನ, ಹೊಸ ಬೆಳೆ ತಳಿ, ಉತ್ತಮ ನಿರ್ವಹಣಾ ಪದ್ಧತಿಗಳನ್ನು ರೈತರಿಗೆ ಪರಿಚಯಿಸಲು ಪ್ರಾತ್ಯಕ್ಷಿಕಾ ಕ್ಷೇತ್ರಗಳ ಅಭಿವೃದ್ಧಿ.

► ರೈತ ಉತ್ಪಾದಕರ ಸಂಸ್ಥೆಗಳು ಮಾರಾಟ ಮಾಡುವ ತೋಟಗಾರಿಕೆ ಉತ್ಪನ್ನಗಳಿಗೆ ಬ್ರಾಂಡ್ ವ್ಯಾಲ್ಯೂ ಕಲ್ಪಿಸಲು ಹಾಗೂ ಉತ್ತಮ ಮಾರುಕಟ್ಟೆ ಸಂಪರ್ಕ ಒದಗಿಸಲು ಕ್ರಮ.

► ರೈತನು ವರ್ಷವಿಡೀ ವರಮಾನ ಪಡೆಯಲು ಸಮಗ್ರ ಕೃಷಿ ಪದ್ಧತಿ ಕಾರ್ಯಕ್ರಮ ಅನುಷ್ಠಾನ.

► ಅಡಿಕೆ ಬೆಳೆಗಾರರನ್ನು ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ಹಾಗೂ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ರೂ.

► ಹೊಸ ಹೈಬ್ರಿಡ್ ಬೀಜ ನೀತಿ ಜಾರಿಗೆ ಕ್ರಮ.

► ಸುವಾಸನೆಯುಕ್ತ ಮತ್ತು ವೈದ್ಯಕೀಯ ಗಿಡಗಳು, ಹಣ್ಣು ಹಂಪಲು, ತರಕಾರಿಗಳು ಮತ್ತು ಸಂಬಾರು ಪದಾರ್ಥಗಳಿಗಾಗಿ ಹೊಸ ಕೃಷಿ ರಫ್ತು ವಲಯ ಸ್ಥಾಪನೆ.

► ತೋಟಗಾರಿಕಾ ಬೆಳೆಗಳ ರಫ್ತಿಗೆ ರಾಜ್ಯದ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪೂರಕ ಸೌಲಭ್ಯ.

► ಹಣ್ಣು ಮತ್ತು ತರಕಾರಿ ಬೆಳೆಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಬೆಳೆಗಾರರಿಗೆ ತರಬೇತಿ ಮತ್ತು ತಾಂತ್ರಿಕ ಬೆಂಬಲ.

► ದ್ರಾಕ್ಷಿ ಕೃಷಿಯ ಉತ್ತೇಜನಕ್ಕೆ ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ಪುನರ್ ರಚಿಸಲು ಕ್ರಮ.

► ಬೆಂಗಳೂರಿನ ಓಕಳೀಪುರದ ರೇಷ್ಮೆ ಇಲಾಖೆ ಎಲ್ಲ ಕಚೇರಿಗಳನ್ನು ಒಂದೇ ಸೂರಿನಡಿ ತರಲು 150 ಕೋಟಿ ರೂ.ವೆಚ್ಚದಲ್ಲಿ ರೇಷ್ಮೆ ಭವನ ನಿರ್ಮಾಣ.

► ರಾಮನಗರದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ.

► ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ 900 ಕೋಟಿ ರೂ.ಗಳನ್ನು ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ 831 ಕೋಟಿ ರೂ.ವನ್ನು ಒದಗಿಸಲಾಗಿದೆ.

ಕೃಷಿ ಮಾರುಕಟ್ಟೆ

► ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು, ಟಿಎಪಿಸಿಎಂಎಸ್ ಹಾಗೂ ಇತರೆ ಸಹಕಾರ ಸಂಸ್ಥೆಗಳು ಹೊಂದಿರುವ ಗೋದಾಮುಗಳಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣಾ ಶುಲ್ಕದ ಶೇ.25(25ಕೋಟಿ ರೂ.) ಅನುದಾನ.

► ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಹಾಗೂ ಟಿಎಪಿಸಿಎಂಎಸ್‍ಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಮೇಲೆ ಶೇ.11ರ ದರದಲ್ಲಿ ವಿತರಿಸಿದ ಅಡಮಾನ ಸಾಲ ಸೌಲಭ್ಯಕ್ಕೆ 6 ತಿಂಗಳ ಅವಧಿಗೆ ಸರಕಾರದಿಂದ ಶೇ.4ರ(5ಕೋಟಿರೂ.) ಬಡ್ಡಿ ಸಹಾಯಧನ.

► 198 ಕೋಟಿ ರೂ.ವೆಚ್ಚದಲ್ಲಿ 5500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ.

► ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗಳಿಗೆ ಗರಿಷ್ಠ 10ಲಕ್ಷ ರೂ.ವರೆಗೆ, ಶೇ.25ರಷ್ಟು ಷೇರು ಬಂಡವಾಳ ಒದಗಿಸಲು ಕ್ರಮ.

► ಬೈಯಪ್ಪನಹಳ್ಳಿಯಲ್ಲಿ 50 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣ.

► ಸಿಂಗೇನ ಅಗ್ರಹಾರ ಸಮೀಪದ ಗುಳಿಮಂಗಳ ಗ್ರಾಮದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ನಿರ್ಮಾಣ.

► ಬಳ್ಳಾರಿಯ ಆಲದಹಳ್ಳಿ ಗ್ರಾಮದಲ್ಲಿ ಅತ್ಯಾಧನಿಕ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ.

► ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿ

► ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ಆಧುನಿಕ ಗುಣವಿಶ್ಲೇಷಣಾ ಘಟಕ ಸ್ಥಾಪನೆ.

ನೀರಾವರಿ

► ರಾಜ್ಯದ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು ಕ್ರಮ. ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಹಂತ 3, ಎತ್ತಿನಹೊಳೆ, ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ. ಕೊಪ್ಪಳ ಜಿಲ್ಲೆ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಕ್ರಮ.

► ಬೇಡ್ತಿ-ವರದಾ ನದಿ ಜೋಡಣೆಯಡಿ ಒಟ್ಟು 22 ಟಿಎಂಸಿ ನೀರನ್ನು ಬಳಸಿಕೊಳ್ಳಲು ವಿವರವಾದ ಯೋಜನಾ ವರದಿಯನ್ನು national perspective plan ಅಡಿಯಲ್ಲಿ ಸಿದ್ಧಪಡಿಸಲು nwda ಗೆ ಮನವಿ. ತಾಂತ್ರಿಕ ಸಾಧ್ಯಾ-ಸಾಧ್ಯತೆಗನುಗುಣವಾಗಿ ಯೋಜನೆಗಳನ್ನು ರೂಪಿಸಲು ಕ್ರಮ.

► ವಿಶ್ವಬ್ಯಾಂಕ್ ನೆರವಿನ ಡ್ರಿಪ್ ಯೋಜನೆಯಡಿ 1500 ಕೋಟಿ ರೂ.ಮೊತ್ತದಲ್ಲಿ ರಾಜ್ಯದ 58 ಅಣೆಕಟ್ಟುಗಳ ಪುನಶ್ಚೇತನ ಮತ್ತ ಅಭಿವೃದ್ಧಿಗೆ ಪ್ರಸ್ತಾವನೆ. ಪ್ರಸಕ್ತ ಸಾಲಿನಲ್ಲಿ ಯೋಜನೆಯ ಅನುಷ್ಠಾನಕ್ಕೆ ಆದ್ಯತೆ.

► ಏತ ನೀರಾವರಿ ಯೋಜನೆಗಳ ವ್ಯವಸ್ಥಿತ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಕಾರ್ಯನೀತಿ ಜಾರಿ.

► ಬೆಂಗಳೂರು ನಗರ ಮತ್ತ ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308 ಎಂಎಲ್‍ಡಿ ನೀರು ತುಂಬಿಸುವ 500 ಕೋಟಿ ರೂ.ವೆಚ್ಚದ ಯೋಜನೆ.

► ಪಶ್ಚಿಮವಾಹಿನಿ ಯೋಜನೆ ಕುರಿತ ಮಾಸ್ಟರ್ ಪ್ಲಾನ್ ಅಡಿ, ಮುಂದಿನ 5 ವರ್ಷಗಳಲ್ಲಿ 3,986 ಕೋಟಿ ರೂ.ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 500 ಕೋಟಿ ರೂ.ಅನುದಾನ.

► ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ನದಿಗಳಲ್ಲಿ ಪ್ರವಾಹ ಮತ್ತು ಭಾರಿ ಅಲೆಗಳಿಂದಾಗಿ ಉಪ್ಪುನೀರು ಹಿಮ್ಮುಖವಾಗಿ ನುಗ್ಗುವುದನ್ನು flap gate ಮುಖಾಂತರ ತಡೆಗಟ್ಟಲು ಖಾರ್‍ಲ್ಯಾಂಡ್ ಯೋಜನೆ ಜಾರಿ.

ಮೀನುಗಾರಿಕೆ

► ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋಮೀಟರ್ ಡೀಸೆಲ್ ಮೇಲಿನ ಮಾರಾಟ ಕರ ಮರುಪಾವತಿಯ ಬದಲು ಡೀಸೆಲ್ ಡೆಲಿವರಿ ಪಾಯಿಂಟ್‍ನಲ್ಲಿಯೇ ಕರರಹಿತ ದರದಲ್ಲಿ ಡೀಸೆಲ್ ವಿತರಣೆಗೆ ಕ್ರಮ.

► ಪಶುವೈದ್ಯಕೀಯ ವಿಜ್ಞಾನದಲ್ಲಿ ಆಯುರ್ವೇದ ಔಷಧಿಗಳ ಅಳವಡಿಕೆ ಉತ್ತೇಜನಕ್ಕೆ ಶಿವಮೊಗ್ಗದ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ಕಾಲೇಜಿನಲ್ಲಿ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ.

► ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರಕಾರದಿಂದ 62 ಕೋಟಿ ರೂ.ಅನುದಾನ.

► ರಾಜ್ಯದಲ್ಲಿ 16 ಮೀನುಮರಿ ಉತ್ಪಾದನಾ ಕೇಂದ್ರಗಳ ತಾಂತ್ರಿಕ ಉನ್ನತೀಕರಣಕ್ಕೆ 2 ಕೋಟಿ ರೂ.ಅನುದಾನ.

► ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಆರು ಕೋಟಿ ರೂ. ವೆಚ್ಚದಲ್ಲಿ ಮೀನು ಉತ್ಪನ್ನಗಳ ಸಂಸ್ಕರಣೆಗೆ ಆಧುನಿಕ ಸಂಸ್ಕರಣಾ ಮತ್ತು ಮೌಲ್ಯವರ್ಧನಾ ಕೇಂದ್ರ ಸ್ಥಾಪನೆ.

► ರಾಜ್ಯಾದ್ಯಂತ 30 ಕೋಟಿ ರೂ.ವೆಚ್ಚದಲ್ಲಿ ಮೀನು ಮಾರಾಟ ಘಟಕ ಹಾಗೂ ಮತ್ಸ್ಯ ದರ್ಶಿನಿಗಳ ಸ್ಥಾಪನೆ.

ಜಾನುವಾರು ಸಂಬಂಧಿತ ಯೋಜನೆ

► ಗೋಹತ್ಯೆ ತಡೆಯಲು ಹಾಗೂ ಜಾನುವಾರುಗಳನ್ನು ಸಂರಕ್ಷಿಸಲು ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪನೆ.

► ದೇಶಿಯ ಜಾನುವಾರುಗಳ, ಕುರಿ, ಮೇಕೆ ತಳಿಗಳ ಮತ್ತು ಕುಕ್ಕಟ ತಳಿಗಳ ಶಾಶ್ವತ ಪ್ರದರ್ಶನ ಮತ್ತು ಪ್ರಾತ್ಯಾಕ್ಷಿಕೆಯೊಂದಿಗೆ ಮಾಹಿತಿ ಹಾಗೂ ತರಬೇತಿ ನೀಡಲು ಥೀಮ್ ಪಾರ್ಕನ್ನು ಬೆಂಗಳೂರಿನ ಹೆಸರಘಟ್ಟದಲ್ಲಿ 100 ಎಕರೆ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ.

► ರಾಜ್ಯದಲ್ಲಿ ಹೆಚ್ಚಿನ ಮಾಂಸ ಉತ್ಪಾದನೆ ಮತ್ತು ಅಧಿಕ ಮರಿಗಳನ್ನು ನೀಡುವ ಉತ್ತಮ ನಂದಿದುರ್ಗ ಮೇಕೆ ತಳಿಗಳ ಅಭಿವೃದ್ದಿ ಮಾಡಿ ಉತ್ಕೃಷ್ಟ ದರ್ಜೆಯ ಹೋತಗಳನ್ನು ರೈತರಿಗೆ ವಿತರಿಸಲು ಒಂದು ಕೋಟಿ ರೂ. ಅನುದಾನ ನೀಡಲಾಗುವುದು.

► ಹೊರರಾಜ್ಯದ ದೇಶಿ ತಳಿಗಳಾದ ಗಿರ್, ಸಾಹಿವಾಲ್, ಒಂಗೋಲ್, ಥಾರ್‍ಪಾರ್ಕರ್ ಮತ್ತು ದೇವಣಿ ತಳಿಗಳನ್ನು ಅಭಿವೃದ್ಧಿಪಡಿಸಿ ರಾಜ್ಯದ ರೈತರಿಗೆ ಪರಿಚಯಿಸಲು ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗುವುದು.

► ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ತಳಿಯ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು.

► ಆಕಸ್ಮಿಕ ಮರಣ ಹೊಂದುವ ಕುರಿ ಮತ್ತು ಮೇಕೆಗಳಿಗೆ ಪರಿಹಾರ ಧನ ನೀಡುವ ಅನುಗ್ರಹ ಕೊಡುಗೆ ಕಾರ್ಯಕ್ರಮ ಮುಂದುವರಿಸಲಾಗುವುದು.

ರಾಜ್ಯ ಸರಕಾರ ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮಾರುಕಟ್ಟೆ ಶುಲ್ಕವನ್ನು ಶೇ.1.5ರಿಂದ ಶೇ.0.60ಗೆ ಇಳಿಸಲಾಗಿದೆ. ಹಾಗೂ ಕೃಷಿ ಉತ್ಪನ್ನ ಸಂಗ್ರಹಣೆ ಹಾಗೂ ಸಂಸ್ಕರಣೆಗೆ ಕೂಡ ಆದ್ಯತೆ ನೀಡಲಾಗಿದೆ.

-ಯಡಿಯೂರಪ್ಪ, ಮುಖ್ಯಮಂತ್ರಿ

ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ

► ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ನೀಡುವ ಸಲುವಾಗಿ ಒಟ್ಟಾರೆ 52,529 ಕೋಟಿ ರೂ. ಅನುದಾನ.

► ರಾಜ್ಯ ಸರಕಾರವು ಗ್ರಾಮೀಣ ಜನತೆಗೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಜಲಧಾರೆ ಯೋಜನೆಯಡಿ 6201 ರೂ. ಕಾಮಗಾರಿಗಳು ಪ್ರಗತಿಯಲ್ಲಿವೆ.

► ಜಲ ಜೀವನ್ ಮಿಷನ್ ಯೋಜನೆಯೊಂದಿಗೆ ಒಗ್ಗೂಡಿಸಿ ರೂಪಿಸಿರುವ ಮನೆ ಮನೆಗೆ ಗಂಗೆ ಯೋಜನೆಯಡಿ 4,316 ಕೋಟಿ ರೂ.ವೆಚ್ಚದಲ್ಲಿ 22 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಲಾಗುವುದು.

► ಹಳ್ಳಿಗಳಿಗೆ ಬಲ್ಕ್ ನೀರು ಸರಬರಾಜು ಮಾಡಲು 25,740 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. 

► ಗ್ರಾಮ ಪಂಚಾಯಿತಿಗಳಲ್ಲಿ ಸುಧಾರಿತ, ಸಂಯೋಜಿತ ಪಂಚತಂತ್ರ 2.0 ಬಳಕೆ ಹಾಗೂ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಕ್ರಮ.

► ಪ್ರತಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸಂಜೀವಿನಿ ಯೋಜನೆಯ ಮಹಿಳಾ ಸ್ವಸಹಾಯ ಸಂಘಗಳಿಂದ ರಚಿತವಾದ ಒಕ್ಕೂಟದ ಮೂಲಕ ಸಮಗ್ರ ಮತ್ತು ವೈಜ್ಞಾನಿಕ ಘನ ತ್ಯಾಜ್ಯ ನಿರ್ವಹಣೆಗೆ ಕ್ರಮ.

► ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಡಿಯಲ್ಲಿರುವ ವಿವಿಧ ಇಂಜಿನಿಯರಿಂಗ್ ವಿಭಾಗಗಳನ್ನು ಒಗ್ಗೂಡಿಸಲು ಕ್ರ್ರಮ.

► ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1,500 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.

► ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯನ್ನು ಮುಂದುವರಿಸಲು 3 ಸಾವಿರ ಕೋಟಿ ರೂ.ಅನುದಾನ ಒದಗಿಸಲಾಗುವುದು.

► ಕೇಂದ್ರ ಸರಕಾರದ ಆತ್ಮನಿರ್ಭರ್ ಯೋಜನೆಯಡಿ ವಿವಿಧ ಇಲಾಖೆಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯ ಪ್ರಸ್ತಾವನೆಗಳನ್ನು ಸಂಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ಒಂದು ಆನ್‍ಲೈನ್ ವೇದಿಕೆಯನ್ನು ರಚಿಸಲಾಗುವುದು.

► ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪುನಾರಚನೆಗೆ ವಿಧೇಯಕವನ್ನು ತರಲಾಗುವುದು.

► ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 900 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಯೋಜನೆಗಳ ಅನುಷ್ಠಾನ.

► ಮೂಲ ಸೌಕರ್ಯ ಕಾಮಗಾರಿಗಳ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಲು ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಗೆ ತಿದ್ದುಪಡಿ. ಇಂತಹ ಯೋಜನೆಗಳಿಗೆ ಬಿಟ್ಟುಕೊಡುವ ಖಾಸಗಿ ಸ್ವತ್ತಿಗೆ ಟಿಡಿಆರ್ ನೀಡುವ ಪ್ರಕ್ರಿಯೆಯ ಸರಳೀಕರಣ.

► ರಾಜ್ಯದ 26 ಅಮೃತ್ ನಗರಗಳಲ್ಲಿ 17 ಕೋಟಿ ರೂ.ಗಳ ವೆಚ್ಚದಲ್ಲಿ ನೀರಿನ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆ.

► ಐದು ಮಹಾನಗರ ಪಾಲಿಕೆಗಳಲ್ಲಿ 11 ಕೋಟಿ ರೂ.ಗಳ ವೆಚ್ಚದಲ್ಲಿ ದಿನಕ್ಕೆ ಕನಿಷ್ಠ 10 ಟನ್ ಸಾಮರ್ಥ್ಯದ ಮಟೀರಿಯಲ್ ರಿಕವರಿ ಸೌಲಭ್ಯಗಳ ಅಭಿವೃದ್ಧಿ.

► ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 9 ಕೋಟಿ ರೂ.ಗಳ ವೆಚ್ಚದಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರಗಳ ಅಭಿವೃದ್ಧಿ.

► ರಾಜ್ಯದ 10 ಮಹಾನಗರಪಾಲಿಕೆಗಳು ಹಾಗೂ 59 ನಗರಸಭೆಗಳಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ಒಟ್ಟು 89 ಸಮುದಾಯ ಮಿಶ್ರಗೊಬ್ಬರ ಘಟಕಗಳ ಅಭಿವೃದ್ಧಿ.

► ಕೇಂದ್ರ ಸರಕಾರದ ನಗರ ಬಸ್ ಸೇವೆಗಳ ವರ್ಧನೆ ಯೋಜನೆಯ ಗರಿಷ್ಠ ಲಾಭ ಪಡೆದು ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಕ್ರಮ.

► ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಕಾಲು ಸಂಕಗಳನ್ನು ನಿರ್ಮಿಸುವ ಗ್ರಾಮ ಬಂಧ ಸೇತುವೆ ಯೋಜನೆ ಅನುಷ್ಠಾನ. 

► ಬೆಳಗಾವಿ ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣ; ರಾಜ್ಯ ಸರಕಾರದಿಂದ ಭೂಸ್ವಾಧೀನ ವೆಚ್ಚದ ಶೇ.50ರಷ್ಟು ಮೊತ್ತ 140 ಕೋಟಿ ರೂ. ಒದಗಿಸಲು ಕ್ರಮ. ರಾಯಚೂರು ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ.

► ವೈಜ್ಞಾನಿಕ ಸಂಚಾರ ನಿರ್ವಹಣಾ ವ್ಯವಸ್ಥೆಯಡಿ 18 ಕೋಟಿ ರೂ. ವೆಚ್ಚದಲ್ಲಿ ಎರಡು ಹೆದ್ದಾರಿಗಳಲ್ಲಿ ಅತ್ಯಾಧುನಿಕ ಸಂಚಾರ ವ್ಯವಸ್ಥೆ, ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‍ಮೆಂಟ್ ಸಿಸ್ಟಂ ಮತ್ತು ಸೇಫ್ಟಿ ಸೊಲ್ಯೂಷನ್ಸ್ ನ ಪ್ರಾಯೋಗಿಕ ಅನುಷ್ಠಾನ.

► ರೈಲ್ವೆ ಮಂತ್ರಾಲಯದೊಂದಿಗೆ 50:50ರ ವೆಚ್ಚ ಹಂಚಿಕೆಯ ಆಧಾರದಲ್ಲಿ 7984 ಕೋಟಿ ರೂ. ಅಂದಾಜು ವೆಚ್ಚದ ಏಳು ಹೊಸ ರೈಲ್ವೆ ಯೋಜನೆ; ಇದರಿಂದ ರಾಜ್ಯದ ರೈಲ್ವೆ ಜಾಲಕ್ಕೆ 1173 ಕಿ.ಮೀ. ರೈಲು ಮಾರ್ಗ ಸೇರ್ಪಡೆ. ಇದರಲ್ಲಿ ರಾಜ್ಯದ ಪಾಲು 3991 ಕೋಟಿ ರೂ.; ಭೂ ಸ್ವಾಧೀನಕ್ಕೆ ರಾಜ್ಯ ಸರಕಾರದಿಂದ 2,630 ಕೋಟಿ ರೂ. ವೆಚ್ಚ.

► ಧಾರವಾಡ-ಕಿತ್ತೂರು-ಬೆಳಗಾವಿಯ ನಡುವೆ 73 ಕಿ.ಮೀ. ಉದ್ದದ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರಕಾರದಿಂದ 463 ಕೋಟಿ ರೂ. ಅನುದಾನ.

► ರಾಜ್ಯದ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ಕಾರ್ಯಾಚರಣೆಗೆ ರಾಜ್ಯ ಮತ್ತು ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನಡುವೆ ಜಂಟಿ ಉದ್ಯಮ ಕಂಪೆನಿ ರಚನೆಗೆ ಕ್ರಮ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ನೌಕಾ ವಾಯುನೆಲೆ ಸಮೀಪದಲ್ಲಿ ಸಿವಿಲ್ ಎನ್‍ಕ್ಲೇವ್ ಅಭಿವೃದ್ಧಿಪಡಿಸಲು ಕ್ರಮ. 175 ಕೋಟಿ ರೂ.ವೆಚ್ಚದಲ್ಲಿ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸಲು ಕ್ರಮ. 384 ಕೋಟಿ ವೆಚ್ಚದ ಶಿವಮೊಗ್ಗ ಮತ್ತು 220 ಕೋಟಿ ರೂ. ವೆಚ್ಚದ ವಿಜಯಪುರ ವಿಮಾನ ನಿಲ್ದಾಣಗಳ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲು ಕ್ರಮ.

► ಹೊನ್ನಾವರದ ಕಾಸರಕೋಡ ಬಂದರು ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿ-66ರಿಂದ ಭಾರತಮಾಲಾ ಯೋಜನೆಯಡಿ 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಚತುಷ್ಪಥ ಸಂಪರ್ಕ ರಸ್ತೆ ನಿರ್ಮಿಸಲು ಕ್ರಮ.

► ಮಂಗಳೂರು ಮತ್ತು ಪಣಜಿ ನಡುವೆ ಜಲಮಾರ್ಗಗಳ ಅಭಿವೃದ್ಧಿ. ಕೇಂದ್ರ ಸರಕಾರದ ರಾಷ್ಟ್ರೀಯ ಜಲಮಾರ್ಗಗಳ ಪ್ರಾಧಿಕಾರದ ಧನ ಸಹಾಯದೊಂದಿಗೆ ಒಟ್ಟು 60 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಐದು ಜಲಮಾರ್ಗಗಳ ಅಭಿವೃದ್ಧಿಗೆ ಕ್ರಮ.

► ಹೊಸ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಜಾರಿಗೆ ಕ್ರಮ.

► ಯಾದಗಿರಿ ಜಿಲ್ಲೆಯ ಕಡೆಚೂರಿನಲ್ಲಿ 1,478 ಕೋಟಿ ರೂ. ವೆಚ್ಚದಲ್ಲಿ ಬಲ್ಕ್ ಡ್ರಗ್ ಪಾರ್ಕ್ ಹಾಗೂ ಮಂಗಳೂರಿನ ಗಂಜಿಮಠದಲ್ಲಿ 66 ಕೋಟಿ ರೂ. ವೆಚ್ಚದಲ್ಲಿ ಪ್ಲಾಸ್ಟಿಕ್ ಪಾರ್ಕ್ ಅಭಿವೃದ್ಧಿ. ಬೀದರ್ ನ ಕೃಷಿ ಉಪಕರಣಗಳ ತಯಾರಿಕಾ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹಕ್ಕೆ ಪ್ಯಾಕೇಜ್ ಘೋಷಣೆ.

► ವಿದ್ಯುತ್ ವಾಹನ ಮತ್ತು ಇಂಧನ ಶೇಖರಣಾ ನೀತಿಯನ್ನು ಪರಿಷ್ಕರಿಸಲು ಕ್ರಮ.

► ಎರಡು ಕಡೆಗಳಲ್ಲಿ ತಲಾ ಕನಿಷ್ಠ 500 ಎಕರೆ ಜಾಗದಲ್ಲಿ ಮುಖ್ಯಮಂತ್ರಿಗಳ ಮೆಗಾ ಸಂಯೋಜಿತ ಕೈಗಾರಿಕಾ ಟೌನ್‍ಷಿಪ್‍ಗಳ ಸ್ಥಾಪನೆ. ಮುಂದಿನ ಮೂರು ವರ್ಷಗಳಲ್ಲಿ ಸುಮಾರು 10 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಣೆ ಹಾಗೂ ಐದು ಲಕ್ಷ ಉದ್ಯೋಗಾವಕಾಶ ಸೃಷ್ಟಿಯ ನಿರೀಕ್ಷೆ.

► ಪೀಣ್ಯ ಕೈಗಾರಿಕಾ ಟೌನ್‍ಶಿಪ್ ಸ್ಥಾಪನೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

► ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲ್ಯಾಬ್ ನಿಗದಿಗೆ ಕ್ರಮ.

► ನೇಕಾರರ ಸಮ್ಮಾನ್ ಯೋಜನೆ ಮುಂದುವರಿಕೆ, ಕೈಮಗ್ಗ ನೇಕಾರರಿಗೆ ವಾರ್ಷಿಕ ತಲಾ 2 ಸಾವಿರ ರೂ. ನೆರವು.

► ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ಸ್ಥಾಪನೆ; ಉತರ ಕರ್ನಾಟಕದ ಭಾಗದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಮಾರ್ಟ್ ಹ್ಯಾಂಡ್‍ಲೂಮ್ ಡಿಸೈನ್ ಸ್ಟುಡಿಯೋ ಸ್ಥಾಪನೆ.

► ಗಣಿಗಾರಿಕೆ ಕ್ಷೇತ್ರದ ಸುಧಾರಣೆಗಾಗಿ ರಾಷ್ಟ್ರೀಯ ಖನಿಜ ಕಾರ್ಯನೀತಿಗೆ ಸಮಾನವಾಗಿ ರಾಜ್ಯ ಖನಿಜ ನೀತಿ 2021-2026 ಜಾರಿಗೆ ಕ್ರಮ.

► ಗಣಿ/ಕಲ್ಲು ಗಣಿಗುತ್ತಿಗೆ ಮತ್ತು ಕ್ರಷರ್ ಲೈಸನ್ಸ್ ಅರ್ಜಿ ವಿಲೇವಾರಿಗೆ ಏಕಗವಾಕ್ಷಿ ವ್ಯವಸ್ಥೆ ಜಾರಿ; ಲೈಸನ್ಸ್ ಸಂಬಂಧಿತ ಕುಂದುಕೊರತೆ ಪರಿಹಾರಕ್ಕೆ ವಿಭಾಗ ಮಟ್ಟದಲ್ಲಿ ಗಣಿ ಅದಾಲತ್ ಆರಂಭ.

► ಕಲಬುರಗಿ ಜಿಲ್ಲೆಯ ಫಿರೋಜಾಬಾದ್‍ನಲ್ಲಿ 500 ಮೆಗಾ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಪಾರ್ಕ್ ಸ್ಥಾಪನೆ.

► ಕೆಪಿಸಿಎಲ್‍ನ 400/220 ಕಿಲೋವ್ಯಾಟ್ ಉಪಕೇಂದ್ರಗಳ ಉಪಕರಣಗಳ ಬದಲಾವಣೆಯೊಂದಿಗೆ ನವೀಕರಣ ಮತ್ತು ಆಧುನೀಕರಣದ ಎರಡನೆ ಹಂತದ ಯೋಜನೆ 100 ಕೋಟಿ ರೂ. ವೆಚ್ಚದಲ್ಲಿ ಜಾರಿ.

► ಕೆಪಿಟಿಸಿಎಲ್‍ನ ಎಲ್ಲ ವಹಿವಾಟು ಮತ್ತು ಪ್ರಕ್ರಿಯೆಗಳನ್ನು ‘ಸಮಸ್ತ್’ ಯೋಜನೆಯಡಿ ಅಂತರ್ಜಾಲದ ಮೂಲಕ ಸಮನ್ವಯಗೊಳಿಸಲು ಕ್ರಮ.

► ರಾಜ್ಯದಲ್ಲಿ 1,000 ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪನೆ.

► 1,000 ಮೆಗಾ ವ್ಯಾಟ್ ಪಂಪ್ಡ್ ಹೈಡ್ರೋ ಸ್ಟೋರೇಜ್ ಪ್ಲಾಂಟ್ ಯೋಜನೆಯನ್ನು 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ.

► ಕರ್ನಾಟಕ ಸ್ಟಾರ್ಟ್ ಅಪ್ ನೀತಿ ಪರಿಷ್ಕರಣೆ.

► ಇಎಸ್‍ಡಿಎಂ ವಲಯದಲ್ಲಿ ವಿಶೇಷ ಪ್ರೋತ್ಸಾಹಕ ಯೋಜನೆ ಜಾರಿ; 5 ವರ್ಷಗಳಲ್ಲಿ 43 ಸಾವಿರ ಉದ್ಯೋಗ ಮತ್ತು 5 ಸಾವಿರ ಕೋಟಿ ರೂ. ಹೂಡಿಕೆ ನಿರೀಕ್ಷೆ.

► ಮೀನು ಮತ್ತು ಕಡಲ ಕಳೆಗಳಿಂದ ಉತ್ಪತ್ತಿಯಾಗುವ ಜೈವಿಕ ಸಕ್ರಿಯ ಸಂಯುಕ್ತಗಳಿಂದ ಆಹಾರ ತಯಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಆರು ಕೋಟಿ ರೂ.ಅಂದಾಜು ವೆಚ್ಚದಲ್ಲಿ ಮಂಗಳೂರಿನಲ್ಲಿ ಕೇಂದ್ರ ಸ್ಥಾಪನೆ.

► ನವೀನ, ಉದಯೋನ್ಮುಖ ತಂತ್ರಜ್ಞಾನದ ಸಂಸ್ಥೆಗಳಿಗೆ ಬೆಂಬಲ ನೀಡಲು 100 ಕೋಟಿ ರೂ.ಗಳ ಹೊಸ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪನೆ.

► ಸೈಬರ್ ಭದ್ರತಾ ಕಾರ್ಯನೀತಿ ಹಾಗೂ ದತ್ತಾಂಶ ಕೇಂದ್ರ ಕಾರ್ಯನೀತಿ ರೂಪಿಸಲು ಕ್ರಮ.

► ಹಾವು ಕಡಿತಕ್ಕೆ ಮುಂದಿನ ತಲೆಮಾರಿನ ಪ್ರತಿನಂಜನ್ನು ಅಭಿವೃದ್ಧಿಪಡಿಸಲು ಪ್ರತಿನಂಜು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ.

► ಕ್ವಾಂಟಂ ಕಂಪ್ಯೂಟಿಂಗ್ ಮತ್ತು ಸಂಬಂಧಿತ ತಂತ್ರಜ್ಞಾನಗಳ ಸಂಶೋಧನೆ ಉತ್ತೇಜಿಸಲು 10 ಕೋಟಿ ರೂ. ವೆಚ್ಚದಲ್ಲಿ ಸಂಶೋಧನಾ ಪಾರ್ಕ್ ಸ್ಥಾಪನೆ.

► ಕೇಂದ್ರ ಸರಕಾರದ ರಾಷ್ಟ್ರೀಯ ಜಿಯೋಸ್ಪೇಷಿಯಲ್ ನೀತಿಯಡಿ ಖಾಸಗಿ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಬಲವರ್ಧನೆ.

► ಪದ್ಮಭೂಷಣ ಡಾ.ಎಚ್.ನರಸಿಂಹಯ್ಯರವರ ಗೌರವಾರ್ಥ ಗೌರಿಬಿದನೂರು ತಾಲೂಕಿನ ಹೊಸೂರಿನಲ್ಲಿ 200 ಎಕರೆ ಪ್ರದೇಶದಲ್ಲಿ ಅಂತರ್‍ರಾಷ್ಟ್ರೀಯ ವಿಜ್ಞಾನ ಕೇಂದ್ರ ನಿರ್ಮಾಣ. ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ.

► ಶಿರಸಿಯಲ್ಲಿ ಏಳು ಕೋಟಿ ರೂ. ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ.  2021-22 ರಲ್ಲಿ ಎರಡು ಕೋಟಿ ರೂ. ಅನುದಾನ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪುನಾರಚನೆಗೆ ವಿಧೇಯಕವನ್ನು ತರಲಾಗುವುದು ಎಂದು ಆಯವ್ಯಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಕ್ಕೆ ರಕ್ಷಣೆಗೆ 2,645 ಕೋಟಿ ರೂ.ಅನುದಾನ

ನಾಡಿನ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ 2021-22ನೇ ಸಾಲಿನ ಆಯವ್ಯಯದಲ್ಲಿ ಒಟ್ಟಾರೆಯಾಗಿ 2,645 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಶ್ರೀಮಂತವಾಗಿರುವ ಸಂಸ್ಕೃತಿ, ಐತಿಹಾಸಿಕ ಪರಂಪರೆಗಳನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಹಾಗೆಯೇ ಸಮೃದ್ಧ ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಘೋಷಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ-ಸಂಸ್ಕೃತಿ

► ಕಿತ್ತೂರಿನ ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಪ್ರವಾಸಿ ಸೌಲಭ್ಯಗಳಿಗಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50ಕೋಟಿ ರೂ. ಅನುದಾನ.

► ಬಸವಕಲ್ಯಾಣದಲ್ಲಿ 500ಕೋಟಿ ರೂ. ವೆಚ್ಚದಲ್ಲಿ ಹೊಸ ಅನುಭವ ಮಂಟಪ ನಿರ್ಮಿಸುವ ಯೋಜನೆಗೆ ಈಗಾಗಲೇ 200ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

► ಜಗಜ್ಯೋತಿ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಅಭಿವೃದ್ಧಿಗೆ 5ಕೋಟಿ ರೂ.ಅನುದಾನ.

► ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಸ್ಥಾಪಿಸಲಾಗುತ್ತಿರುವ ಆದಿಚುಂಚನಗಿರಿನಾಥ ಪಾರಂಪರಿಕ ಕೇಂದ್ರಕ್ಕೆ 10 ಕೋಟಿ ರೂ. ಅನುದಾನ.

► ಆಯೋಧ್ಯೆಯಲ್ಲಿ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.ಅನುದಾನ.

► ರಾಜ್ಯಾದ್ಯಂತ ರಂಗಾಯಣಗಳ ಮೂಲಕ ಡಾ.ಎಸ್.ಎಲ್.ಭೈರಪ್ಪನವರ ಪರ್ವ ನಾಟಕದ ಪ್ರದರ್ಶನ. ಅದಕ್ಕಾಗಿ ಒಂದು ಕೋಟಿ ರೂ.ಅನುದಾನ.

► ಆದಿಕವಿ ಪಂಪನಿಂದ ಮುದ್ದಣದ ಕಾಲಘಟ್ಟದವರೆಗೆ ಎಲ್ಲ ಕೃತಿಗಳನ್ನು ಡಿಜಿಟಲೀಕರಿಸಿ ವಿಕೀಪಿಡಿಯಾ-ವಿಕಿಸೋರ್ಸ್ ಮೂಲಕ ಜಗತ್ತಿನ ಯಾವುದೇ ಭಾಗದಲ್ಲಿ ಅಂತರ್‍ಜಾಲದ ಮೂಲಕ ಲಭ್ಯವಾಗುವಂತೆ ಕ್ರಮವಹಿಸಲಾಗುವುದು.

► ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲು ಸರಕಾರ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಿದೆ.

► ಭಾರತರತ್ನ ಪಂಡಿತ್ ಭೀಮಸೇನ್ ಜೋಶಿಯವರ 100ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸಂಗೀತೋತ್ಸವ ಹಾಗೂ ವಿಚಾರ ಸಂಕಿರಣ  ಏರ್ಪಡಿಸಲಾಗುವುದು.

ಕ್ರೀಡಾ ಕ್ಷೇತ್ರ

► ಎರಡು ಕೋಟಿ ರೂ.ವೆಚ್ಚದಲ್ಲಿ ರಾಜ್ಯದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುವುದು.

► ದೇವನಹಳ್ಳಿಯಲ್ಲಿ ಅಂತರ್‍ರಾಷ್ಟ್ರೀಯ ಮಟ್ಟದ ಕ್ರೀಡಾ ಮೂಲಸೌಲಭ್ಯಗಳನ್ನು ಸೃಜಿಸಿ ಮಿಷನ್ ಒಲಂಪಿಕ್ಸ್ ಗೆ ಸಿದ್ಧಗೊಳಿಸಲಾಗುವುದು.

► 10 ಕೋಟಿ ರೂ. ವೆಚ್ಚದಲ್ಲಿ ಮಂಡ್ಯ ನಗರದ ಕ್ರೀಡಾಂಗಣದ ಉನ್ನತೀಕರಣ.

► 2022ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯ ಕ್ರೀಡಾಕೂಟ ಆಯೋಜನೆ.

► ಜಕ್ಕೂರಿನ ಸರಕಾರಿ ವೈಮಾನಿಕ ತರಬೇತಿ ಶಾಲೆಯ ಸೌಲಭ್ಯಗಳ ಅಭಿವೃದ್ಧಿಗೆ ಎರಡು ಕೋಟಿ ರೂ.

ಪ್ರವಾಸೋದ್ಯಮ

► ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ ರೂ.

► ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರು ಸುತ್ತಮುತ್ತಲಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ವಾರಾಂತ್ಯ ಪ್ರವಾಸ ಕೆಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು.

► ಕಾವೇರಿ ನೀರಾವರಿ ನಿಗಮದ ವತಿಯಿಂದ ಮೈಸೂರು ಜಿಲ್ಲೆಯ ಕಬಿನಿ ಅಣೆಕಟ್ಟಿನ ಕೆಳಭಾಗದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿ.

► ಉಡುಪಿ ಜಿಲ್ಲೆಯ ತ್ರಾಸಿ, ಮರವಂತೆ, ಒತ್ತಿನೆಣಿ ಹಾಗೂ ಇತರೆ ಕಡಲ ತೀರಗಳನ್ನು ಅಂತರ್‍ರಾಷ್ಟ್ರೀಯ ದರ್ಜೆಗೇರಿಸಲು 10ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ.

► ಉಡುಪಿ ಜಿಲ್ಲೆ ಬೈಂದೂರು ತಾಲೂಕು ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ ರೂ.ಅನುದಾನ.

► ಐದು ಕೋಟಿ ರೂ.ವೆಚ್ಚದಲ್ಲಿ ನವ ಶಿಲಾಯುಗದಿಂದ ಕಬ್ಬಿಣಯುಗದ ತಾಣ ಕುಡುತಿನಿ ಆ್ಯಶ್‍ಮೌಂಡ್(ಬೂದಿ ದಿಬ್ಬ) ಅಭಿವೃದ್ಧಿ, ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ.ಬಿಡುಗಡೆ.

► ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮ ಮತ್ತು ಚಿಕ್ಕಮಗಳೂರು ಜಿಲ್ಲೆ ಕೆಮ್ಮಣ್ಣುಗುಂಡಿ ಗಿರಿಧಾಮಗಳ ನಿರ್ವಹಣೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ.

► ತುಮಕೂರಿನಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಸ್ಮಾರಣಾರ್ಥ ಮತ್ತು ಉಡುಪಿಯಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ಗೌರವಾರ್ಥ ತಲಾ ಎರಡು ಕೋಟಿ ರೂ.ವೆಚ್ಚದಲ್ಲಿ ಸ್ಮೃತಿವನ ನಿರ್ಮಾಣ.

ಅರಣ್ಯಾಭಿವೃದ್ಧಿ

► ಅಳಿವಿನಂಚಿನಲ್ಲಿರುವ ಲೆಸ್ಸರ್ ಫ್ಲೋರಿಕನ್ ಪಕ್ಷಿ ಪ್ರಭೇದ ಸಂರಕ್ಷಣೆ ಕಾರ್ಯಕ್ರಮಕ್ಕೆ 50 ಲಕ್ಷ ರೂ.ಅನುದಾನ.

► ಮಾನವ-ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸಲು ವನ್ಯಜೀವಿಗಳ ಸುಗಮ ಮತ್ತು ಅಬಾಧಿತ ಚಲನವಲನಕ್ಕೆ ಅವಶ್ಯವಿರುವ ಎರಡು ಅರಣ್ಯ ಪ್ರದೇಶಗಳ ಮಧ್ಯದ ಕಾರಿಡಾರ್ ಪ್ರದೇಶವನ್ನು ಸರಕಾರವು ಖರೀದಿಗೆ ನೀತಿ ರೂಪಿಸಲು ಕ್ರಮ.

► ವನ್ಯಜೀವಿಗಳ ಹಾವಳಿಯಿಂದ ಉಂಟಾಗುತ್ತಿರುವ ಹಾನಿ ಪ್ರಕರಣಗಳಲ್ಲಿ ತ್ವರಿತವಾಗಿ ದಯಾತ್ಮಕ ಧನ ಪಾವತಿಸುವ ನಿಟ್ಟಿನಲ್ಲಿ ಅರಣ್ಯ ಇ-ಪರಿಹಾರ ಯೋಜನೆ ಜಾರಿ.

► ರಾಜ್ಯದ ನಗರಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಾಗೂ ಆರ್ಥಿಕ ಸಹಾಯದೊಂದಿಗೆ ಸ್ಮೃತಿ ವನಗಳ ನಿರ್ಮಾಣ.

► ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿರುವ ಅರಣ್ಯಗಳ ವಿಧ ಮತ್ತು ಸಾಂದ್ರತೆ ವಿವರಗಳನ್ನು 50 ಸೆಂಟಿಮೀಟರ್ ಸ್ಯಾಟ್‍ಲೈಟ್ ರೆಸಲ್ಯೂಷನ್ ಒಳಗೊಂಡ ನಕ್ಷೆ ತಯಾರಿಕೆ.

► ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಪ್ರದೇಶದಲ್ಲಿ 5ಕೋಟಿ ರೂ. ವೆಚ್ಚದಲ್ಲಿ ವನ್ಯಜೀವಿ ಸಫಾರಿಯನ್ನೊಳಗೊಂಡಂತೆ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ.

► ಚಾಮರಾಜನಗರ ಜಿಲ್ಲೆಯ ಬೂದಿಪಡಗದಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ಆನೆ ಶಿಬಿರ ಪ್ರಾರಂಭ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top