ಮಹಿಳಾ ದಿನಾಚರಣೆ ವಿಶೇಷ: ಬಜೆಟ್ ನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 37,188 ಕೋಟಿ ರೂ. ಅನುದಾನ | Vartha Bharati- ವಾರ್ತಾ ಭಾರತಿ

--

ಮಹಿಳಾ ದಿನಾಚರಣೆ ವಿಶೇಷ: ಬಜೆಟ್ ನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 37,188 ಕೋಟಿ ರೂ. ಅನುದಾನ

ಬೆಂಗಳೂರು, ಮಾ.8: ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಉನ್ನತೀಕರಣ. ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರಕಾರಿ ಕಚೇರಿಗಳಲ್ಲಿ ಶಿಶು ಪಾಲನಾ ಕೇಂದ್ರ ತೆರೆಯಲು ಕ್ರಮ. ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ.4ರ ರಿಯಾಯಿತಿ ಬಡ್ಡಿದರದಲ್ಲಿ ಮಹಿಳಾ ಅಭಿವೃದ್ಧಿ ನಿಗಮ/ ರಾಜ್ಯ ಹಣಕಾಸು ಸಂಸ್ಥೆಯಿಂದ 2 ಕೋಟಿ ರೂ.ವರೆಗೆ ಸಾಲ ಸೌಲಭ್ಯ.

‘ಸಂಜೀವಿನಿ’ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಆರು ಸಾವಿರ ಸಣ್ಣ ಉದ್ಯಮ ಸ್ಥಾಪನೆಗೆ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಬೆಂಬಲ, ಇದರಿಂದ 60 ಸಾವಿರ ಮಹಿಳೆಯರಿಗೆ ಅನುಕೂಲ. ಮಹಿಳೆಯರ ಸಣ್ಣ ಉದ್ಯಮಗಳಿಗೆ ತಾಂತ್ರಿಕ ನೆರವು. 2,260 ಕಿರು ಉದ್ದಿಮೆಗಳ ಮೂಲಕ 25 ಸಾವಿರ ಮಹಿಳೆಯರಿಗೆ ಉತ್ತೇಜನ.

ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು, ವಿಭಾಗ ಮಟ್ಟದಲ್ಲಿ ವಾರ್ಷಿಕ ಮೇಳ ಆಯೋಜನೆ ಹಾಗೂ ಇ-ಮಾರುಕಟ್ಟೆ ಸೌಲಭ್ಯ ಜಾರಿ. ಬೆಂಗಳೂರಿನಲ್ಲಿ ಗಾರ್ಮೆಂಟ್ ಉದ್ಯಮದ ಮಹಿಳಾ ಕಾರ್ಮಿಕರಿಗೆ 30 ಕೋಟಿ ರೂ. ವೆಚ್ಚದಲ್ಲಿ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ‘ವನಿತಾ ಸಂಗಾತಿ’ ಯೋಜನೆಗೆ ಚಾಲನೆ. ಮಹಿಳೆಯರು ಉದ್ಯೋಗ ಕೈಗೊಳ್ಳಲು ಪೂರಕ ವಾತಾವರಣ ನಿರ್ಮಾಣಕ್ಕಾಗಿ ವಿವಿಧ ನಿಯಮಾವಳಿಗಳ ಮರು ಪರಿಶೀಲನೆ.

ಮಹಿಳಾ ಆಯವ್ಯಯ ಮತ್ತು ಮಕ್ಕಳ ಆಯವ್ಯಯವನ್ನು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಳವಡಿಸಲು ಕ್ರಮ. ಸೇಫ್ ಸಿಟಿ ಯೋಜನೆಯಡಿ ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ 7,500 ಕ್ಯಾಮರಾ ಅಳವಡಿಕೆ. ತಂತ್ರಜ್ಞಾನ ಆಧಾರಿತ ಇ-ಬೀಟ್ ಮೂಲಕ ರಾತ್ರಿ ಗಸ್ತನ್ನು ತೀವ್ರಗೊಳಿಸಲು ಕ್ರಮ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ನೆರವು ಹಾಗೂ

ಮಾರ್ಗದರ್ಶನ ನೀಡಲು ನಿಮ್ಹಾನ್ಸ್ ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ಸಹಯೋಗದೊಂದಿಗೆ ‘ಉತ್ಕೃಷ್ಟತಾ ಕೇಂದ್ರ’ ಸ್ಥಾಪನೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೈಸನ್ಸ್ ಪಡೆದ ಮಹಿಳೆಯರಿಗೆ ಪ್ರಾಂಗಣದಲ್ಲಿನ ನಿವೇಶನ, ಗೋದಾಮು, ಅಂಗಡಿ, ಅಂಗಡಿ-ವ-ಗೋದಾಮುಗಳ ಹಂಚಿಕೆಯಲ್ಲಿ ಶೇ.10ರಷ್ಟು ಮೀಸಲಾತಿ. ಸರಕಾರದ ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳ ಮಕ್ಕಳ ಆರೈಕೆ ರಜೆ ಸೌಲಭ್ಯ. ಮಹಿಳಾ ವಾಣಿಜ್ಯೋದ್ಯಮಿಗಳನ್ನು ಬೆಂಬಲಿಸಲು, ಐದು ಕೋಟಿ ರೂ. ವೆಚ್ಚದಲ್ಲಿ Elevate Women Entrepreneurship ಕಾರ್ಯಕ್ರಮ ಜಾರಿ.

ರಾಜ್ಯದ ಸ್ವ-ಸಹಾಯ ಗುಂಪುಗಳು ಮತ್ತು ಅವುಗಳ ಒಕ್ಕೂಟವನ್ನು ಬಲಪಡಿಸಲು ಸ್ವಸಹಾಯ ಗುಂಪುಗಳ ನೀತಿ ಜಾರಿ, ಎಲ್ಲ ಸ್ವ ಸಹಾಯ ಗುಂಪುಗಳನ್ನು ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ ತರಲು ಕ್ರಮ. ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆಯಲ್ಲಿ “ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣ ಅಭಿಯಾನ”ಕ್ಕೆ ಚಾಲನೆ. ಮಹಿಳಾ ಉದ್ದೇಶಿತ ಯೋಜನೆಗಳಿಗೆ 37,188 ಕೋಟಿ ರೂ.ಅನುದಾನ.

ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ 7795 ಕೋಟಿ ರೂ.ಅನುದಾನ

ಬೆಂಗಳೂರಿನ ಮಲ್ಲೇಶ್ವರದಲ್ಲಿ ಮೈಸೂರು ಲ್ಯಾಂಪ್ಸ್ ವರ್ಕ್ಸ್ ನಿಯಮಿತಕ್ಕೆ ಸೇರಿದ ಪ್ರದೇಶದಲ್ಲಿ Experience Bengaluru ಕೇಂದ್ರ ಅಭಿವೃದ್ಧಿ. ಬೈಯ್ಯಪ್ಪನಹಳ್ಳಿಯಲ್ಲಿರುವ ಎನ್.ಜಿ.ಇ.ಎಫ್.ಗೆ ಸೇರಿದ 105 ಎಕರೆ ಜಮೀನಿನಲ್ಲಿ ಹಾಗೂ ಇನ್ನೂ ಮೂರು ಕಡೆಗಳಲ್ಲಿ ವೃಕ್ಷೋದ್ಯಾನಗಳ ಅಭಿವೃದ್ಧಿ. ಬೆಂಗಳೂರು ನಗರದ ಸುತ್ತಲೂ 65 ಕಿ.ಮೀ.ಉದ್ದದ 100 ಮೀ.ಅಗಲದ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಪ್ರಾರಂಭಿಸಲು ಕ್ರಮ.

ಬೆಂಗಳೂರು ಉಪನಗರ ರೈಲು ಯೋಜನೆಗೆ 2021-22ನೇ ಸಾಲಿಗೆ 850 ಕೋಟಿ ರೂ.ಅನುದಾನ. ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು 4,751 ಕೋಟಿ ರೂ.ವೆಚ್ಚದಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಇದರಿಂದ, ಗರಿಷ್ಠ ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯವು 60 ದಶಲಕ್ಷಕ್ಕೆ ಏರಿಕೆಯಾಗಲಿದೆ.

ಕೆ-ರೈಡ್(ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ ನಿಯಮಿತ) ಮೂಲಕ 813 ಕೋಟಿ ರೂ.ಗಳ ವೆಚ್ಚದಲ್ಲಿ ಯಶವಂತಪುರ-ಚನ್ನಸಂದ್ರ ಮತ್ತು ಬೈಯಪ್ಪನಹಳ್ಳಿ-ಹೊಸೂರು ವಿಭಾಗಗಳ ನಡುವೆ ದ್ವಿಪಥಗೊಳಿಸುವ ಯೋಜನೆಗಳನ್ನು ಶೇ.50ರಷ್ಟು ವೆಚ್ಚ ಹಂಚಿಕೆಯ ಆಧಾರದ ಮೇಲೆ ರೈಲ್ವೆ ಮಂತ್ರಾಲಯದ ಸಹಯೋಗದಲ್ಲಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯ ಕಾಮಗಾರಿಗಳು ಪ್ರಾರಂಭವಾಗಿದ್ದು, 2023ರ ಅಂತ್ಯದ ವೇಳೆಗೆ ಮುಕ್ತಾಯಗೊಳಿಸಲಾಗುವುದು.

ಕೋರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿ ಮತ್ತು ನಿರ್ವಹಣೆ(ಕೆ-100) ಯೋಜನೆಯನ್ನು 169 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನ ಮಾಡಲಾಗುವುದು. ಕೆ-100 ಯೋಜನೆಯಡಿಯಲ್ಲಿ ಕೋರಮಂಗಲ ಕಣಿವೆ ನೀರುಗಾಲುವೆಯನ್ನು ಶುದ್ಧ ನೀರಿನ ಕಾಲುವೆಯಾಗಿ ಪರಿವರ್ತಿಸಿ, ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲಾಗುವುದು.

ಕೆ.ಸಿ.ವ್ಯಾಲಿ ಆವರಣದಲ್ಲಿನ 248 ಎಂ.ಎಲ್.ಡಿ ಸಾಮರ್ಥ್ಯದ ಎಸ್.ಟಿ.ಪಿಯನ್ನು ಪುನರುಜ್ಜೀವನ ಮತ್ತು ಉನ್ನತೀಕರಣಗೊಳಿಸುವ ಕಾಮಗಾರಿಯನ್ನು ಬಿಬಿಎಂಪಿ ಸಹಯೋಗದೊಂದಿಗೆ 450 ಕೋಟಿ ರೂ.ಮೊತ್ತದಲ್ಲಿ 2021-22ನೆ ಸಾಲಿನ ಕೈಗೊಳ್ಳಲಾಗುವುದು. ಮೇಕೆದಾಟು ಸಮತೋಲನ ಜಲಾಶಯವನ್ನು ನಿರ್ಮಿಸಿ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಮತ್ತು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಸರಕಾರ ಬದ್ಧವಾಗಿದೆ.

2021ರ ಜೂನ್ ಮತ್ತು 2022ರ ಡಿಸೆಂಬರ್ ನಡುವೆ 41 ಕಿ.ಮೀ.ಉದ್ದದದ ಮತ್ತೊಂದು ಮೆಟ್ರೊ ಮಾರ್ಗವನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲು ಯೋಜಿಸಲಾಗಿದೆ. ಮೆಟ್ರೊ ಮತ್ತು ರೈಲ್ವೆ ನಿಲ್ದಾಣಗಳ ನಡುವಿನ ಸಂಪರ್ಕಕ್ಕಾಗಿ ಯಶವಂತಪುರ, ಕೆ.ಆರ್.ಪುರ ಮತ್ತು ಜ್ಞಾನಭಾರತಿಯಲ್ಲಿ ಮೂರು ಪಾದಚಾರಿ ಮೇಲ್ಸೇತುವೆಗಳು, ಎನ್.ಎಚ್-4 ಮಾರ್ಗದ ದಾಸರಹಳ್ಳಿ ಮತ್ತು ಚಿಕ್ಕಬಿದರಕಲ್ಲು ಇಲ್ಲಿ ಎರಡು ಪಾದಚಾರಿ ಮೇಲ್ಸೇತುವೆಗಳು, ಮುಂಬರುವ ಮೆಟ್ರೊ ನಿಲ್ದಾಣಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸಲು ಹೊಸೂರು ರಸ್ತೆಗೆ ಅಡ್ಡಲಾಗಿ ಏಳು ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಟಿಕೆಟಿಂಗ್ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಆಟೊಮ್ಯಾಟಿಕ್ ಫೇರ್ ಕಲೆಕ್ಷನ್ ಸಿಸ್ಟಮ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ವಲಸೆ ಕಾರ್ಮಿಕರು ಹಾಗೂ ಬಡಜನರಿಗೆ ಅತ್ಯಾಧುನಿಕ ಹಾಗೂ ತಜ್ಞ ವೈದ್ಯಕೀಯ ಸೇವೆಗಳನ್ನು ಒದಗಿಸಲು ಉತ್ತರ ಬೆಂಗಳೂರು ಪ್ರದೇಶದಲ್ಲಿ ಒಂದು ಹೊಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲಾಗುವುದು.

ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಗ್ಯಾಸ್ಟ್ರೋಎಂಟ್ರಾಲಜಿ ವಿಜ್ಞಾನ ಹಾಗೂ ಆರ್ಗನ್ ಟ್ರಾನ್ಸ್ ಪ್ಲಾಂಟ್ ಸಂಸ್ಥೆ(ಬಡ ಜನರಿಗೆ ಕೈಗೆಟಕುವ ದರದಲ್ಲಿ ಅಂಗಾಂಗ ಕಸಿ ಸೌಲಭ್ಯವನ್ನು ಒದಗಿಸುವ)ಯನ್ನು 28 ಕೋಟಿ ರೂ.ಗಳ ವೆಚ್ಚದಲ್ಲಿ 120 ಹಾಸಿಗೆಗಳು ಹಾಗೂ ಅವಶ್ಯಕ ಉಪಕರಣಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಚಾಲನೆ ನೀಡಲಾಗುವುದು.

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರವನ್ನು 20 ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. ಬಿಬಿಎಂಪಿ ವತಿಯಿಂದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ 57 ವಾರ್ಡುಗಳಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಜನಾರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಬಿಬಿಎಂಪಿ ಶಾಲೆಗಳ ನವೀಕರಣ ಮತ್ತು ಪುನರ್ ನಿರ್ಮಾಣವನ್ನು 33 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗುವುದು.

ಆಗಸ್ಟ್ 2021 ರೊಳಗೆ “ಒಂದು ರಾಷ್ಟ್ರ ಒಂದು ಕಾರ್ಡ್” ವ್ಯವಸ್ಥೆ ಜಾರಿಗೆ ಕ್ರಮ. ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಈ ಕಾರ್ಡ್ ಬಳಕೆಗೆ ಅವಕಾಶ. ಬೆಂಗಳೂರು ನಗರದ ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಮತ್ತು ಸಂಸ್ಕರಣೆಯನ್ನು ನಿರ್ವಹಿಸಲು ಪ್ರತ್ಯೇಕ ಕಂಪನಿ ಸ್ಥಾಪನೆ. ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಪ್ರತಿ ವಾರಾಂತ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು 2 ಕೋಟಿ ರೂ.ಮೀಸಲು. ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ 2021-22ನೇ ಸಾಲಿನಲ್ಲಿ ಒಟ್ಟಾರೆಯಾಗಿ 7795 ಕೋಟಿ ರೂ. ಅನುದಾನ.

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ ವಲಯ: 52,519 ಕೋಟಿ ರೂ.ಅನುದಾನ

ಅಶಕ್ತರು, ವೃದ್ಧರು, ವಿಧವೆಯರು ಮತ್ತು ವಿಶೇಷ ಚೇತನರಿಗೆ ಸರಕಾರದ ದತ್ತಾಂಶ ಆಧರಿಸಿ ಪಿಂಚಣಿ ಸೌಲಭ್ಯ ನೀಡುವ ‘ಮನೆ ಬಾಗಿಲಿಗೆ ಮಾಸಾಶನ’ ಅಭಿಯಾನಕ್ಕೆ ಚಾಲನೆ. ಕೃಷಿ ಭೂಮಿಯನ್ನು ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಭೂ ಕಂದಾಯ ಅಧಿನಿಯಮ ತಿದ್ದುಪಡಿಗೆ ಕ್ರಮ. ಕರ್ನಾಟಕ ಸರಕಾರಿ ವಿಮಾ ಇಲಾಖೆಯ ಎಲ್ಲ ವ್ಯವಹಾರಗಳ ಗಣಕೀಕರಣಕ್ಕೆ ಕ್ರಮ.

ತ್ವರಿತವಾಗಿ ನಿಖರ ಭೂ-ದಾಖಲೆಗಳನ್ನು ಒದಗಿಸಲು ಗಣಕೀಕೃತ ಆಕಾರಬಂದ್ ಮಾಹಿತಿ ಮತ್ತು ಪಹಣಿ ಮಾಹಿತಿಯನ್ನು ಸಂಯೋಜಿಸಲು ಕ್ರಮ. 25 ಕೋಟಿ ರೂ.ವೆಚ್ಚದಲ್ಲಿ ಗ್ರಾಮೀಣ ಜನ ವಸತಿ ಪ್ರದೇಶಗಳಿಗೆ ಹಕ್ಕು ದಾಖಲೆಗಳನ್ನು ವಿತರಿಸುವ “ಸ್ವಾಮಿತ್ವ” ಯೋಜನೆ ಅನುಷ್ಠಾನ. ನಗರ ಮಾಪನ ಜಾರಿಯಲ್ಲಿರುವ 48 ನಗರ ಮತ್ತು ಪಟ್ಟಣಗಳ ಎಲ್ಲ ನಗರ ಮಾಪನ ದಾಖಲೆಗಳ ಸಂರಕ್ಷಣೆಗೆ ಕ್ರಮ.

ಮೂಲ ಗೇಣಿದಾರರು, ಕುಮ್ಕಿ ಜಮೀನು, ಖಾನೇ, ಬಾನೇ, ಡೀಮ್ಡ್ ಅರಣ್ಯ ಸಾಗುವಳಿದಾರರ ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆ. ಎಚ್‍ಆರ್‍ಎಂಎಸ್-2 ಯೋಜನೆ ಅಡಿಯಲ್ಲಿ ಸರಕಾರ ರಾಜ್ಯದ ಎಲ್ಲ ಸರಕಾರಿ ನೌಕರರ ಸೇವೆಗಳನ್ನು ಆನ್‍ಲೈನ್ ಮೂಲಕ ಜಾರಿಗೊಳಿಸಲು ಕ್ರಮ. ಕೌಟುಂಬಿಕ ಗುರುತು ಸೃಜನೆ ಹಾಗೂ ಸ್ವಯಂ ಪ್ರೇರಣೆಯಿಂದ ನಾಗರಿಕರಿಗೆ ಸೇವೆ/ಸೌಲಭ್ಯಗಳನ್ನು ಒದಗಿಸಲು ಸಾಮಾಜಿಕ ನೋಂದಣಿ ಪುಸ್ತಕ ಮತ್ತು ಅರ್ಹತಾ ನಿರ್ವಹಣಾ ವ್ಯವಸ್ಥೆ ಜಾರಿಗೆ 15 ಕೋಟಿ ರೂ.ಅನುದಾನ.

ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಎಲ್ಲ ಯೋಜನೆಗಳಿಗೂ ನೇರ ಫಲಾನುಭವಿ ವರ್ಗಾವಣೆ (ಡಿಬಿಟಿ) ವೇದಿಕೆಯಡಿ ಪಾವತಿ ವ್ಯವಸ್ಥೆ ವಿಸ್ತರಣೆ. ಆಸ್ತಿ ನೋಂದಣಿಯಲ್ಲಿ ವಂಚನೆ ಹಾಗೂ ದಾಖಲೆ ತಿರುಚುವುದನ್ನು ತಡೆಗಟ್ಟಲು ಬ್ಲಾಕ್‍ಚೈನ್ ತಂತ್ರಜ್ಞಾನ ಬಳಸಿ ಆಸ್ತಿ ನೋಂದಣಿ ಮಾಡುವ ಪ್ರಾಯೋಗಿಕ ಯೋಜನೆ. ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ ಮೂಲಕ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ ಜಾರಿ.

ರಾಜ್ಯ ದತ್ತಾಂಶ ಕೇಂದ್ರದ ಸೈಬರ್ ಸುರಕ್ಷತೆ ಬಲಪಡಿಸಲು ಎರಡು ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಭದ್ರತಾ ಕಾರ್ಯಾಚರಣೆ ಕೇಂದ್ರ ಸ್ಥಾಪನೆ. 35 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ದತ್ತಾಂಶ ಕೇಂದ್ರದ ವಿಪತ್ತು ಚೇತರಿಕೆ ಮತ್ತು ವ್ಯವಹಾರ ಮುಂದುವರಿಕೆ ತಾಣಕ್ಕೆ ಚಾಲನೆ. ಮೂರು ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಶೈಕ್ಷಣಿಕ ದಾಖಲೆಗಳು, ಪ್ರಶಸ್ತಿಗಳ ಮಾಹಿತಿಗಳನ್ನೊಳಗೊಂಡ ರಾಷ್ಟ್ರೀಯ ಶೈಕ್ಷಣಿಕ ಡೆಪಾಸಿಟರಿ ಅನುಷ್ಠಾನ.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯನ್ನು ಸುಲಭಸಾಧ್ಯಗೊಳಿಸಲು ಎರಡು ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭಾಷೆಗೆ ತಾಂತ್ರಿಕ ಪರಿಕರಗಳ ಸೂಟ್ ಅಭಿವೃದ್ಧಿ. ಸರಕಾರದ ವಿವಿಧ ಇಲಾಖೆಗಳ ಜಾಹೀರಾತು ಮತ್ತು ಪ್ರಕಟಣೆಗಳನ್ನು ಸಂಯೋಜಿಸಿ ಸೃಜನಶೀಲಗೊಳಿಸಲು ಬ್ರ್ಯಾಂಡ್ ಪ್ರೊಮೋಷನ್ ಕೌನ್ಸಿಲ್ ರಚನೆ. ಸೇವಾ ಸಿಂಧು ಪೋರ್ಟಲ್ ಮೂಲಕ ಚಿತ್ರೀಕರಣ ಅನುಮತಿ ನೀಡುವ ಪ್ರಕ್ರಿಯೆ ಸರಳೀಕರಣ.

ಮುಂದಿನ ಐದು ವರ್ಷಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 100 ಪೋಲಿಸ್ ಠಾಣೆ ನಿರ್ಮಾಣದ ಗುರಿ ಹೊಂದಲಾಗಿದ್ದು, 2021-22ರಲ್ಲಿ ಇದಕ್ಕಾಗಿ 25 ಕೋಟಿ ರೂ.ಅನುದಾನ. 2740 ಕೋಟಿ ರೂ.ಗಳ ಮೊತ್ತದಲ್ಲಿ ಪೋಲಿಸ್ ಗೃಹ 2025 ಯೋಜನೆಗೆ ಚಾಲನೆ ನೀಡಲಾಗಿದ್ದು, 10,032 ವಸತಿಗೃಹ ನಿರ್ಮಾಣದ ಗುರಿ ಹೊಂದಲಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನಲ್ಲಿರುವ ರಾಜ್ಯ ಮೀಸಲು ಪಡೆಯ 10ನೆ ಬೆಟಾಲಿಯನ್ ಬಲಪಡಿಸಲು ಎಂಟು ಕೋಟಿ ರೂ. ಅನುದಾನ. ಕೊಡಗು ಮತ್ತು ಹಾವೇರಿ ಜಿಲ್ಲೆಯಲ್ಲಿ ನೂತನ ಜಿಲ್ಲಾ ಪೊಲೀಸ್ ಸಂಕೀರ್ಣ ನಿರ್ಮಾಣಕ್ಕೆ ತಲಾ ಎಂಟು ಕೋಟಿ ರೂ.ಹಂಚಿಕೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಪರಿಷ್ಕೃತ ಕೆ-ಸೇಫ್ ಯೋಜನೆ ಮುಂದಿನ 5 ವರ್ಷಗಳಲ್ಲಿ ಜಾರಿಗೊಳಿಸಲಾಗುವುದು.

ಆಧುನಿಕ ತಂತ್ರಜ್ಞಾನದೊಂದಿಗೆ ಕರಾವಳಿ ಕಾವಲು ಪಡೆಯನ್ನು ಹಂತ ಹಂತವಾಗಿ ಬಲಪಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ.ಅನುದಾನ ಒದಗಿಸಲಾಗಿದೆ. 40 ಕೋಟಿ ರೂ.ಗಳ ವೆಚ್ಚದಲ್ಲಿ ರಾಜ್ಯದ ಎಂಟು ಕಾರಾಗೃಹಗಳ ಸಾಮರ್ಥ್ಯ ಹೆಚ್ಚಳ ಮಾಡಲು ಉದ್ದೇಶಿಸಿದ್ದು, 2021-22ರಲ್ಲಿ 10 ಕೋಟಿ ರೂ.ಅನುದಾನ ಒದಗಿಸಲಾಗುವುದು.

ಖೈದಿಗಳನ್ನು ಕಾರಾಗೃಹದಿಂದಲೆ ಆನ್‍ಲೈನ್ ಮೂಲಕ ನ್ಯಾಯಾಲಯ ಕಲಾಪಕ್ಕೆ ಹಾಜರುಪಡಿಸಲು 15 ಕೋಟಿ ರೂ. ವೆಚ್ಚದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ. ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರ ಪ್ರಾರಂಭ. Contactless, Faceless and Cashless ವ್ಯವಸ್ಧೆಯ ಮೂಲಕ ಸಾರಿಗೆ ಇಲಾಖೆಯ ಮೂರು ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಕ್ರಮ.

ಸಾರಥಿ ತಂತ್ರಾಂಶ ಸೇವೆಗಳನ್ನು ಸಾರ್ವಜನಿಕರಿಗೆ ಅನುವಾಗುವಂತೆ ಒದಗಿಸಲು ““Facilitation Centre”” ಸ್ಥಾಪನೆ ಮಾಡಲಾಗುವುದು. ಸಾರಿಗೆ ಇಲಾಖೆಯ 66 ಕಚೇರಿಗಳನ್ನು ಕಾಗದ ರಹಿತ ಕಚೇರಿಯಾಗಿ ರೂಪಿಸಲು ಹಳೆಯ ದಾಖಲಾತಿಗಳ ಡಿಜಿಟಲೀಕರಣ ಮಾಡಲಾಗುವುದು. ರಾಜ್ಯದಲ್ಲಿ 52 ಹೊಸ ಬಸ್ ನಿಲ್ದಾಣಗಳು ಹಾಗೂ 16 ಬಸ್ ಘಟಕಗಳನ್ನು ನಿರ್ಮಾಣ ಮಾಡಲಾಗುವುದು. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೆ 2021-22ನೇ ಸಾಲಿನಲ್ಲಿ ಒಟ್ಟಾರೆಯಾಗಿ 52,519 ಕೋಟಿ ರೂ.ಅನುದಾನ ಒದಗಿಸಲಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top