ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ರಾಗಿಣಿ, ಸಂಜನಾ ಸೇರಿ 25 ಆರೋಪಿಗಳ ವಿರುದ್ಧ 2,900 ಪುಟಗಳ ಚಾರ್ಜ್ಶೀಟ್
ಬೆಂಗಳೂರು, ಮಾ.16: ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ, ಸಂಜನಾ ಸೇರಿ 25 ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ಎನ್ಡಿಪಿಎಸ್ ಕೋರ್ಟ್ ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಡ್ರಗ್ಸ್ ಜಾಲ ಪ್ರಕರಣದ ಸಂಬಂಧ ಸಿಸಿಬಿ ಅಧಿಕಾರಿಗಳು ಕೋರ್ಟ್ ಗೆ ಸುಮಾರು 2,900 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಪ್ರಕರಣದ ಸಂಬಂಧ 180 ಸಾಕ್ಷಿಗಳ ಹೇಳಿಕೆ ದಾಖಲಿಸಿರುವ ಸಿಸಿಬಿ ಅಧಿಕಾರಿಗಳು, ಕಾಟನ್ಪೇಟೆ ಪೊಲೀಸರ ಮೂಲಕ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಹೆಸರೂ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಚಾರ್ಜ್ಶೀಟ್ನಲ್ಲಿ ಏನಿದೆ ?: ಕಳೆದ 2019ರ ಮೇ 26ರಂದು ನಟಿ ರಾಗಿಣಿ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜು ಮಾಡಿರುವುದು, ನಗರದ ಖಾಸಗಿ ಹೊಟೇಲ್ವೊಂದರಲ್ಲಿ ಆರೋಪಿ ರವಿಶಂಕರ್ ಜೊತೆ ರಾಗಿಣಿ ಪಾರ್ಟಿ ಮಾಡಿರುವುದು ಹಾಗೂ ಡ್ರಗ್ಸ್ ಮಾತ್ರೆಗಳ ಸೇವನೆ ಜೊತೆ ಹಂಚಿಕೆ ಮಾಡಿರುವುದರ ಬಗ್ಗೆ ಚಾರ್ಜ್ ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
2020ರ ಜು.5ರಂದು ಯಲಹಂಕದ ಖಾಸಗಿ ಹೊಟೇಲ್ನಲ್ಲಿ ಪಾರ್ಟಿ, ಆರೋಪಿಗಳ ಜೊತೆ ಡ್ರಗ್ಸ್ ಸೇವನೆ, 2020 ಜನವರಿಯಿಂದ ಆಗಸ್ಟ್ ವರೆಗೂ ಲೂಮ್ ಪೆಪೆ ಸಾಂಬಾಗೆ ಫೋನ್ ಮಾಡಿ ಡ್ರಗ್ಸ್ ಖರೀದಿ ಮಾಡಿದ್ದಾರೆ. ನೈಜೀರಿಯಾದ ಪ್ರಜೆಯಿಂದ ರಾಗಿಣಿ ಡ್ರಗ್ಸ್ ಪಡೆದಿರುವ ಮಾಹಿತಿ ಇದ್ದು, ಇತರೆ ಆರೋಪಿಗಳಿಗೆ ವಾಟ್ಸ್ಆ್ಯಪ್ ಮೂಲಕ ಮಾದಕ ವಸ್ತು ಕೇಳಿರುವ ಮಾಹಿತಿ ಬಹಿರಂಗವಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.
ಗೆಳೆಯ ರವಿಶಂಕರ್ ಜೊತೆಯಲ್ಲಿ ರಾಗಿಣಿ ಡ್ರಗ್ಸ್ ಡೀಲ್ ಬಗ್ಗೆ ಮಾತನಾಡಿದ್ದಾರೆ. ಮನೆ ಮೇಲಿನ ದಾಳಿ ವೇಳೆ ಪತ್ತೆಯಾಗಿದ್ದ ಗಾಂಜಾ ತುಂಬಿದ್ದ ಸಿಗರೇಟ್ ಬಗ್ಗೆಯೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಅಲ್ಲದೆ, ರಾಗಿಣಿ ಅವರು ನೈಜೀರಿಯಾ ಪ್ರಜೆ ಜೊತೆ ಡ್ರಗ್ಸ್ ಪಡೆಯುವ ಬಗ್ಗೆ ಚಾಟಿಂಗ್ ಮಾಡಿದ್ದಾರೆ. ಇತ್ತ ಗೆಳೆಯ ರವಿಶಂಕರ್ ಜೊತೆಯಲ್ಲಿ ನಟಿ ರಾಗಿಣಿ ಡ್ರಗ್ಸ್ ಡೀಲ್ ಬಗ್ಗೆ ಏನೇನು ಮಾತನಾಡಿದ್ದಾರೆ ಎನ್ನುವುದನ್ನು ಕೂಡ ಅಧಿಕಾರಿಗಳು ಚಾರ್ಜ್ಶೀಟ್ ನ 70ನೆ ಪುಟದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ 69ನೆ ಪುಟದಲ್ಲಿ 2018ರ ಡಿ.8ರಂದು ಡ್ರಗ್ಸ್ ಬಗ್ಗೆ ರವಿಶಂಕರ್ ಪತ್ನಿ, ನಟಿ ರಾಗಿಣಿ ವಿರುದ್ಧ ಮಾಡಿರುವ ಚಾಟಿಂಗ್ ಕೂಡ ಚಾರ್ಜ್ಶೀಟ್ ನಲ್ಲಿ ಉಲ್ಲೇಖವಾಗಿದೆ.