ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಭೇಟಿಯಾದ ಬಳ್ಳಾರಿ ಸಂಸದ, ಶಾಸಕರು
ಬಳ್ಳಾರಿ, ಮಾ.26: ಹೊಸದಿಲ್ಲಿಯ ಸಂಸತ್ ಭವನದಲ್ಲಿ ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಹಾಗೂ ಗಣಿ, ಭೂವಿಜ್ಞಾನ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಭೇಟಿ ಮಾಡಿ ವಿವಿಧ ಯೋಜನೆಗಳಿಗೆ ಅನುದಾನ ಮತ್ತು ಅನುಮತಿ ಒದಗಿಸಿಕೊಡುವಂತೆ ಮನವಿ ಮಾಡಿದರು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತೀನ್ ಗಡ್ಕರಿ, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ಸಿಂಗ್ ಪಟೇಲ್ ಅವರಿಗೆ ಈಗಾಗಲೇ ಭೇಟಿಯಾಗಿ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಅಗತ್ಯ ಅನುದಾನ ಮತ್ತು ಅನುಮತಿ ಒದಗಿಸಿಕೊಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ನಿಯೋಗ ಪ್ರಹ್ಲಾದ್ ಜೋಶಿ ಗಮನಕ್ಕೆ ತಂದಿತು.
ಈ ಎಲ್ಲ ಬೇಡಿಕೆಗಳನ್ನು ಸಂಬಂಧಿಸಿದ ಸಚಿವರೊಂದಿಗೆ ಸಮಾಲೋಚಿಸಿ ಅಗತ್ಯ ಅನುದಾನ ಮತ್ತು ಅನುಮತಿಗಳನ್ನು ಕೊಡಿಸಬೇಕೆಂದು ನಿಯೋಗ ಮನವಿ ಮಾಡಿತು.