''ಆತ ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಕಟ್ಟು ಕಥೆಗಳನ್ನು ಹೇಳಿದ್ದಾನೆ''
ಶ್ರೀಕಾಂತ್ ರೆಡ್ಡಿ ಆರೋಪಕ್ಕೆ ಕೆಎಸ್ಆರ್ಟಿಸಿ ಉಡುಪಿ ಡಿಪೋ ಮ್ಯಾನೇಜರ್ ಸ್ಪಷ್ಟನೆ
ಉಡುಪಿ, ಎ.7: ತನ್ನನ್ನು ಡಿಪೋ ಮ್ಯಾನೇಜರ್ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿ ಡಿಪೋದಲ್ಲಿ ಸಿಬ್ಬಂದಿಯೊಬ್ಬರು ಕಣ್ಣೀರು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಉದಯ್ ಶೆಟ್ಟಿ ಸ್ಪಷ್ಟನೆ ನೀಡಿದ್ದು, 'ಆತ ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಕಟ್ಟುಕಥೆಗಳನ್ನು ಹೇಳಿದ್ದಾನೆ' ಎಂದು ತಿಳಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಉಡುಪಿ ಕೆಎಸ್ಆರ್ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿರುವ ಶ್ರೀಕಾಂತ್ ರೆಡ್ಡಿ ಎಂಬಾತ, ತನ್ನನ್ನು ಡಿಪೋ ಮ್ಯಾನೇಜರ್ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಪೋ ಮ್ಯಾನೇಜರ್, 'ಶ್ರೀಕಾಂತ್ ರೆಡ್ಡಿ ಇವತ್ತು ವೈಯಕ್ತಿಕವಾಗಿ ಸ್ವಯಿಚ್ಛೆಯಿಂದ ಕೆಲಸಕ್ಕೆ ಬಂದಿದ್ದ. ಅವನನ್ನು ನಾವು ಕಚೇರಿಯಿಂದ ಕೆಲಸಕ್ಕೆ ಕರೆದಿಲ್ಲ. ಇವತ್ತು ನಮ್ಮ ಘಟಕದಲ್ಲಿ ಯಾವುದೇ ರೀತಿಯ ತಾಂತ್ರಿಕ ಸಿಬ್ಬಂದಿಗಳು ವರದಿ ಮಾಡಿಲ್ಲ. ಚಾಲನಾ ಸಿಬ್ಬಂದಿಗಳು ಕೂಡ ಇವತ್ತು ಕರ್ತವ್ಯಕ್ಕೆ ಬಂದಿಲ್ಲ. ಹಾಗಿದ್ದರೂ ಆತ ಒಬ್ಬನೇ ಬಂದು ಕೆಲಸಕ್ಕೆ ವರದಿ ಮಾಡಿಕೊಂಡಿದ್ದಾನೆ' ಎಂದು ತಿಳಿಸಿದ್ದಾರೆ.
ಶ್ರೀಕಾಂತ್ ರೆಡ್ಡಿ ಓರ್ವ ಮದ್ಯವ್ಯಸನಿ. ಪದೇ ಪದೇ ಕರ್ತವ್ಯಕ್ಕೆ ಗೈರು ಹಾಜರಾಗುವ ಪ್ರವೃತ್ತಿ ಉಳ್ಳವರಾಗಿದ್ದಾರೆ. ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಕಟ್ಟುಕಥೆಗಳನ್ನು ಆತ ಹೇಳಿದ್ದಾನೆ. ಸಂಸ್ಥೆಯ ಇಮೇಜ್ ಹಾಳು ಮಾಡಲು ಈ ರೀತಿಯ ಹೇಳಿಕೆ ನೀಡಿದ್ದಾನೆ. ನಾನು ಆತನ ಮೇಲೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ ಎಂದು ಮ್ಯಾನೇಜರ್ ಉದಯ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.