ಚೀನಾ ಆ್ಯಪ್ ಮೂಲಕ ವಂಚನೆ: 76.67 ಕೋಟಿ ಆಸ್ತಿ ಜಪ್ತಿ ಮಾಡಿದ ಈಡಿ
ಬೆಂಗಳೂರು, ಮೇ 12: ಚೀನಾ ಆ್ಯಪ್ ಮೂಲಕ ಸಾರ್ವಜನಿಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆನ್ಲೈನ್ ಲೋನ್ ಆ್ಯಪ್ ಕಂಪೆನಿಗಳಿಂದ ಜಾರಿ ನಿರ್ದೇಶನಾಲಯ (ಈಡಿ) 76.67 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಸಿಐಡಿಯಲ್ಲಿ ದಾಖಲಾಗಿದ್ದ ಪ್ರಕರಣದ ಆಧಾರದಲ್ಲಿ ಈಡಿ ತನಿಖೆ ನಡೆಸಿತ್ತು. ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿತ್ತು. ಸಾಲ ಮರುಪಾವತಿಸದವರಿಗೆ ರಿಕವರಿ ಏಜೆಂಟ್ಗಳು ಕಿರುಕುಳ ನೀಡುತ್ತಿದ್ದರು. ಬಡ್ಡಿ, ಚಕ್ರ ಬಡ್ಡಿ, ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದರು.
ಕಂಪೆನಿಗಳು ಲೋನ್ ಪಡೆದವರನ್ನು ಸುಲಿಗೆ ಮಾಡುತ್ತಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು, ತನಿಖೆ ನಡೆಸಿದ್ದರು. ಸಾಲ ಪಡೆದವರ ಮೊಬೈಲ್ ನಂಬರ್, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದ ಕಂಪೆನಿ, ಆರ್ಬಿಐ ನಿಯಮವನ್ನು ಉಲ್ಲಂಘಿಸಿ ಭಾರತದಲ್ಲಿ ವ್ಯವಹಾರ ನಡೆಸುತ್ತಿತ್ತು.
ಮಧ್ಯಮ ವರ್ಗದವರಿಗೆ ಕಡಿಮೆ ಅವಧಿಯಲ್ಲಿ ಸಾಲ ಸೌಲಭ್ಯ ನೀಡುತ್ತೇವೆ ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದವು. ತುರ್ತು ಸಾಲ ನೀಡುವ ಆ್ಯಪ್ಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಈಡಿ ಅಧಿಕಾರಿಗಳು ತುರ್ತು ಸಾಲ ನೀಡುವ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಕನ್ನ ಹಾಕುವುದಲ್ಲದೇ ಮಾನಸಿಕ ಹಿಂಸೆ, ಕಿರುಕುಳ ನೀಡುತ್ತಿದ್ದ ಇನ್ಸ್ಟಂಟ್ಲೋನ್ ಆ್ಯಪ್ಗಳ ವಿರುದ್ಧ ಜಾರಿ ನಿರ್ದೇಶನಾಲಯ ಕಾನೂನಾತ್ಮಕವಾಗಿ ದೂರು ದಾಖಲಿಸಿಕೊಂಡಿತ್ತು.
ತೆಲಂಗಾಣ ಪೊಲೀಸರು ಮತ್ತು ಸೈಬರ್ ವಿಭಾಗದವರು ಇದುವರೆಗೆ ಗುರುತಿಸಿದ್ದ ಆ್ಯಪ್ಗಳ ವಿರುದ್ಧ ಮತ್ತು ಅದನ್ನು ನಿರ್ವಹಿಸುತ್ತಿದ್ದ ಚೀನಾ ಮೂಲದ ವ್ಯಕ್ತಿಗಳು ಹಾಗೂ ಅದಕ್ಕೆ ಸಹಕಾರ ನೀಡುತ್ತಿದ್ದವರ ಮೇಲೆ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾನೂನಿನಡಿ ದೂರು ದಾಖಲಿಸಿಕೊಂಡಿತ್ತು. ಈ ಕುರಿತು ಮಾಹಿತಿ ನೀಡಿರುವ ಇಡಿ ಅಧಿಕಾರಿಯೊಬ್ಬರು, ಕಾನೂನಿನ ಕಣ್ತಪ್ಪಿಸಿ ಅಕ್ರಮವಾಗಿ ಸಾಲ ನೀಡುತ್ತಿದ್ದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು, ಈಗಾಗಲೇ ಹೈದರಾಬಾದ್ ಪೊಲೀಸರು ದಾಖಲಿಸಿರುವ 27 ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಕಲೆಹಾಕುತ್ತಿದ್ದೇವೆ ಎಂದು ತಿಳಿಸಿದ್ದರು.