ಬಿಎಸ್ವೈ ಮತ್ತವರ ಕುಟುಂಬದಿಂದ ರಾಜ್ಯ ಲೂಟಿ: ದಿನೇಶ್ ಗುಂಡೂರಾವ್ ಆರೋಪ
ಬೆಂಗಳೂರು, ಜು. 11: `ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಕರ್ನಾಟಕ ರಾಜ್ಯವನ್ನು ಲೂಟಿ ಮಾಡಿ ಆ ಹಣವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು `ಮುಖ್ಯಮಂತ್ರಿ' ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿ ನಗರ ಕ್ಷೇತ್ರದ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ರವಿವಾರ ಈ ಸಂಬಂಧ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಹೆಸರನ್ನು ಬಳಸಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರು ಹಣ ವಸೂಲಿ ಮಾಡಿದ್ದಾರೆಂದು ಖಾಸಗಿ ಸುದ್ದಿ ವಾಹಿನಿಯನ್ನು ವರದಿ ಬಿತ್ತರವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
`ಬಹುಶಃ ಕೇಂದ್ರ ಸರಕಾರ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಇದರಲ್ಲಿ ಪಾಲಿರುವ ಕಾರಣ ಈ ಬ್ರಹ್ಮಾಂಡ ಭ್ರಷ್ಟಾಚಾರ ನೋಡಿಯೂ ಅವರು ಸುಮ್ಮಿದ್ದಾರೆ' ಎಂದು ಆರೋಪಿಸಿರುವ ದಿನೇಶ್ ಗುಂಡೂರಾವ್, `ಯಡಿಯೂರಪ್ಪ ಮತ್ತವರ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಸಿಬಿಐ, ಜಾರಿ ನಿರ್ದೇಶನಾಲಯ(ಇಡಿ) ಸೇರಿದಂತೆ ಇನ್ನಿತರ ತನಿಖಾ ಸಂಸ್ಥೆಗಳು ಮೌನವೇಕೇ? ಎಂದು ಇದೇ ಸಂದರ್ಭದಲ್ಲಿ ಪ್ರಶ್ನೆ ಮಾಡಿದ್ದಾರೆ.