ಜು.26ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಮುಖ್ಯಮಂತ್ರಿ ಯಡಿಯೂರಪ್ಪ
"ಮುಂದಿನ ಚುನಾವಣೆವರೆಗೂ ನಾನೇ ಸಿಎಂ"
ಬೆಂಗಳೂರು, ಜು.17: ರಾಜ್ಯದಲ್ಲಿ ಪರ್ಯಾಯ ನಾಯಕತ್ವದ ವಿಚಾರದ ಬಗ್ಗೆ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಮುಖ್ಯಮಂತ್ರಿಯ ಬದಲಾವಣೆಯೂ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆವರೆಗೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಎರಡು ದಿನಗಳ ದಿಲ್ಲಿ ಪ್ರವಾಸ ಮುಗಿಸಿಕೊಂಡು ಶನಿವಾರ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ, ತಮ್ಮ ಸರಕಾರಿ ನಿವಾಸ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ತಿಂಗಳು ಮತ್ತೆ ನಾನು ದಿಲ್ಲಿಗೆ ಹೋಗುತ್ತಿದ್ದೇನೆ. ಆಗ ಈ ವಿಚಾರದ ಬಗ್ಗೆ ಪಕ್ಷದ ವರಿಷ್ಠರ ಜೊತೆ ಮಾತನಾಡುತ್ತೇನೆ ಎಂದರು.
ರಾಜ್ಯದಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೆ ಗೊಂದಲ ಇಲ್ಲ. ಪರ್ಯಾಯ ನಾಯಕತ್ವ ಆಗಲಿ, ನಾಯಕತ್ವ ಬದಲಾವಣೆ ವಿಚಾರವಾಗಲಿ ಚರ್ಚೆಯೇ ಆಗಿಲ್ಲ. ಜು.26ರಂದು ಬಿಜೆಪಿ ಶಾಸಕಾಂಗ ಪಕ್ಷ ಸಭೆ ಕರೆಯುತ್ತೇನೆ. ಕೆಲವು ಪ್ರಮುಖ ವಿಚಾರಗಳ ಬಗ್ಗೆ ಶಾಸಕರ ಜೊತೆ ಆ ಸಭೆಯಲ್ಲಿ ಚರ್ಚಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ದಿಲ್ಲಿ ಪ್ರವಾಸ ಬಹಳ ಯಶಸ್ವಿಯಾಗಿ ಮುಗಿಸಿಕೊಂಡು ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ 20 ನಿಮಿಷ ಮಾತನಾಡಿದ್ದೇನೆ. ಪ್ರಮುಖವಾಗಿ ರಾಜ್ಯದಲ್ಲಿ ಪಕ್ಷದ ಸಂಘಟನೆ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆಯೂ ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.