ಖರ್ಗೆ, ಧರ್ಮಸಿಂಗ್, ಮುನಿಯಪ್ಪ ಸೋಲಿಗೆ ಕಾರಣರು ಯಾರು?: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು, ಅ.4: ಜೆಡಿಎಸ್ ಕೇವಲ ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಮಾತ್ರ ಆದ್ಯತೆ ನೀಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನೀವು ಎಷ್ಟು ಸಮುದಾಯಗಳಿಗೆ ಗೌರವ ಕೊಟ್ಟಿದ್ದೀರಿ? ನಿಮ್ಮ ಪಕ್ಷದ ದಲಿತ ಸಮಾಜದ ನಾಯಕರನ್ನು ಚುನಾವಣೆಯಲ್ಲಿ ಸೋಲಿಸಿದವರು ಯಾರು? ಪಟ್ಟಿ ದೊಡ್ಡದಾಗಿದೆ, ಒಮ್ಮೆ ನೋಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಬಿಡದಿಯ ತೋಟದಲ್ಲಿ ನಡೆದಿರುವ ಜನತಾ ಪರ್ವ 1.0 ಹಾಗೂ ಮಿಷನ್ 123 ಯ ಆರನೇ ದಿನದ ಕಾರ್ಯಾಗಾರದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಅಡ್ಡಿ ಬರುತ್ತಾರೆಂದು ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಕಾರಣ ಯಾರು? ಎಂದು ಪ್ರಶ್ನಿಸಿದರು.
ಧರ್ಮಸಿಂಗ್ ಅವರ ಸೋಲಿಗೆ ಕಾರಣ ಯಾರು? ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದವರು ಯಾರು? ಬಿಜೆಪಿಗೆ ಶಕ್ತಿಯೇ ಇಲ್ಲದ ಹಾಗೂ ಕಾರ್ಪೊರೇಟರ್ ಕೂಡ ಆಗಲು ಆಗದಂತಹ ವ್ಯಕ್ತಿಯನ್ನು ಕರೆತಂದು ಕೋಲಾರದಲ್ಲಿ ನಿಲ್ಲಿಸಿ ಪ್ರತ್ಯಕ್ಷವಾಗಿ, ಬೆಂಬಲ ನೀಡಿದವರು ಯಾರು? ರಮೇಶ್ ಕುಮಾರ್ ಯಾರ ಪರ ಕೆಲಸ ಮಾಡಿದರು. ಅಲ್ಲಿನ ಬಿಜೆಪಿ ಸಂಸದರ ಆಯ್ಕೆ ಹಿಂದೆ ಯಾರಿದ್ದಾರೆ? ಎಂದು ಕುಮಾರಸ್ವಾಮಿ ಡಿಕೆಶಿಗೆ ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಪಕ್ಷದ ದಲಿತ ನಾಯಕರ ಸೋಲಿಗೆ ಅವರೇ ಕಾರಣವಲ್ಲವೇ? ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಅ.16ರಿಂದ ಜೆಡಿಎಸ್ ಜನತಾ ಸಂಗಮ: ಜೆಡಿಎಸ್ ಪಕ್ಷದ ಜನತಾ ಪರ್ವ 1.0 ಕಾರ್ಯಾಗಾರದ ಎರಡನೇ ಹಂತವಾಗಿ ಜನತಾ ಸಂಗಮ ಇದೇ ಅ.16ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಇದು ಪ್ರತಿ ತಾಲೂಕಿನಲ್ಲಿ ಎಲ್ಲರ ಜೊತೆಗೂಡಿ ನಡೆಯುವ ಕಾರ್ಯಕ್ರಮ. ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗುವ ಹಾಗೂ ತಳಹದಿಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶ ಇದಕ್ಕಿದೆ ಎಂದು ಕುಮಾರಸ್ವಾಮಿ ಹೇಳಿದರು.
ಜನತಾ ಸಂಗಮದ ಮೂಲಕ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುವ ತೀರ್ಮಾನ ಮಾಡಲಾಗಿದೆ. ಜತೆಗೆ, ಕಾರ್ಯಾಗಾರಕ್ಕೆ ಹಾಜರಾಗಿರುವ ಪ್ರತಿಯೊಬ್ಬರ ಮಾಹಿತಿಯನ್ನೂ ಕಚೇರಿಗೆ ತೆಗದುಕೊಳ್ಳಲಾಗುತ್ತದೆ. ಪ್ರತಿ ಅಂಶವನ್ನು ನಮ್ಮ ತಂಡಗಳು ಪರಿಶೀಲನೆ ಮಾಡುತ್ತಿವೆ. ಪಕ್ಷದ ಕಚೇರಿ ಹಾಗೂ ಕಾರ್ಯಕರ್ತರ ನಡುವೆ ಯಾವುದೇ ಸಂವಹನ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿದ್ದೇವೆ. ಆ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿಕೊಂಡು ಉತ್ತಮ ವ್ಯವಸ್ಥೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ನಾಳೆ ಕ್ರಿಶ್ಚಿಯನ್ ಪ್ರತಿನಿಧಿಗಳ ಕಾರ್ಯಗಾರ: ಇಂದು ಎಸ್ಸಿ, ಎಸ್ಟಿ ವಿಭಾಗದ ಕಾರ್ಯಾಗಾರ ನಡೆಯಿತು. ಚಿಂತಕ ಪ್ರೊ.ಮುಕುಂದ ರಾಜು ಅವರು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ನಿನ್ನೆ ಮುಸ್ಲಿಮ್ ಬಾಂಧವರ ಜೊತೆ ಕಾರ್ಯಾಗಾರ ಮಾಡಲಾಗಿತ್ತು. ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಪ್ರಧಾನ ಭಾಷಣ ಮಾಡಿದ್ದರು. ನಾಳೆ ಅಂತಿಮವಾಗಿ ಕ್ರಿಶ್ಚಿಯನ್ ಬಾಂಧವರ ಜೊತೆ ಕಾರ್ಯಾಗಾರ ಇದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.