ಈ 9 ರಾಷ್ಟ್ರಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ: ರಾಜ್ಯ ಸರಕಾರ ಆದೇಶ
ಬೆಂಗಳೂರು, ಅ.26: ವಿದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಸಕ್ರಿಯವಾಗಿರುವ ಹಿನ್ನೆಲೆ 9 ರಾಷ್ಟ್ರಗಳ ನಾಗರಿಕರು ಕರ್ನಾಟಕ ಪ್ರವೇಶಿಸಲು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಝಿಲ್, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಿಯಸ್, ನ್ಯೂಜಿಲೆಂಡ್ ಮತ್ತು ಜಿಂಬಾಬ್ವೆಯಿಂದ ವಿಮಾನ, ಹಡಗುಗಳ ಮೂಲಕ ರಾಜ್ಯಕ್ಕೆ ಬರುವವರು ತಕ್ಷಣವೇ ಕೋವಿಡ್ ಪರೀಕ್ಷೆಗೆ ಮಾದರಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೆಲ ದೇಶಗಳಿಂದ ಬರುವ ಅಂತರ್ರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಲಾಗಿದ್ದು, ರಾಜ್ಯದ ವಿಮಾನ ನಿಲ್ದಾಣಗಳಿಗೆ ಆಗಮಿಸಿದಾಗ, ಅವರ ಲಸಿಕೆ ಸ್ಥಿತಿ-ಗತಿಯನ್ನು ಲೆಕ್ಕಿಸದೆ ಪರೀಕ್ಷೆಗೊಳಪಡಬೇಕು ಎಂದು ರಾಜ್ಯ ಸರಕಾರ ಹೇಳಿದೆ.
ಕೋವಿಡ್ ಲಸಿಕೆಯ ವಿಷಯದಲ್ಲಿ ಭಾರತದ ನೀತಿಯೊಂದಿಗೆ ಸಹಮತ ಹೊಂದಿರುವ ಬ್ರಿಟನ್, ಫ್ರಾನ್ಸ್, ಜರ್ಮನಿ, ನೇಪಾಳ, ಬೆಲಾರಸ್, ಲೆಬನಾನ್, ಅರ್ಮೇನಿಯಾ, ಉಕ್ರೇನ್, ಬೆಲ್ಜಿಯಂ, ಹಂಗೇರಿ ಮತ್ತು ಸರ್ಬಿಯಾ ರಾಷ್ಟ್ರಗಳಿಂದ ಬರುವವರು ಎರಡು ಡೋಸ್ ಲಸಿಕೆ ಪಡೆದಿದ್ದರೆ ಪರೀಕ್ಷೆ ಇಲ್ಲದೆ ತೆರಳಬಹುದು. 14 ದಿನಗಳ ಕಾಲ ನಿಗಾದಲ್ಲಿ ಇರಬೇಕು ಎಂದು ಸೂಚಿಸಲಾಗಿದೆ.
ಅ.25 ರಿಂದ ಜಾರಿಗೆ ಬರುವ ಸುತ್ತೋಲೆಯೊಂದನ್ನು ಉಲ್ಲೇಖಿಸಲಾಗಿದ್ದು, ಸೂಚಿರುವ ದೇಶಗಳ ಪ್ರಯಾಣಿಕರು ಏಳು ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿರಬೇಕು ಮತ್ತು ಅವರ ಆಗಮನದ 8ನೆ ದಿನದಂದು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಇನ್ನು ವಿಮಾನ ನಿಲ್ದಾಣಗಳಲ್ಲಿ ಸ್ವಯಂ ಘೋಷಣೆಯ ನಮೂನೆಯೊಂದಿಗೆ ಪ್ರಯಾಣಿಕರು ಅವರ ಪ್ರಯಾಣದ ಮೊದಲು 72 ಗಂಟೆಗಳಿಗಿಂತಲೂ ಹಳೆಯದಾದ ತಮ್ಮ ನೆಗೆಟಿವ್ ಆರ್ಟಿ-ಪಿಸಿಆರ್ ವರದಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಹೇಳಲಾಗಿದೆ.
ಕೇಂದ್ರ ಸರಕಾರದ ನಿರ್ಧಾರಕ್ಕೆ ಅನುಗುಣವಾಗಿ, ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಕೋವಿಡ್ ಸೂಕ್ತ ನಡವಳಿಕೆಯನ್ನು ಎಲ್ಲ ಸಮಯದಲ್ಲೂ ಅನುಸರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಆದೇಶವು ವಿಮಾನದಲ್ಲಿನ ಸಿಬ್ಬಂದಿಗೂ ಈ ನಿರ್ದೇಶನ ನೀಡಲಾಗಿದೆ.
ಯಾವುದೇ ಪ್ರಯಾಣಿಕರು ಹಾರಾಟದ ಸಮಯದಲ್ಲಿ ಕೋವಿಡ್ ರೋಗಲಕ್ಷಣಗಳನ್ನು ಕಂಡುಬಂದಲ್ಲಿ, ಅವರು ಆರೋಗ್ಯ ಸಂಬಂಧ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.