ಕಲಿಕಾ ಪರಿವರ್ತನೆ, ವೃತ್ತಿಭವಿಷ್ಯಕ್ಕೆ ನಾಂದಿ: ಸಚಿವ ಡಾ.ಅಶ್ವತ್ಥ ನಾರಾಯಣ
ಡಿಸಿಟಿಇ-ಇನ್ಫೊಸಿಸ್ ಒಡಂಬಡಿಕೆಗೆ ಅಂಕಿತ ►ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು-ಬೋಧಕರಿಗೆ ಪ್ರಯೋಜನ
ಬೆಂಗಳೂರು, ಅ. 27: ‘ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ರೀತಿಯಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡುವ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು(ಡಿಸಿಟಿಇ) ಮುಂಚೂಣಿ ಐಟಿ ಕಂಪೆನಿ ಇನ್ಫೋಸಿಸ್ನೊಂದಿಗೆ ಸಹಿಹಾಕಿತು.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಡಿಸಿಟಿಇಯ ‘ಹೆಲ್ಪ್ ಎಜುಕೇಟ್’ ಉಪಕ್ರಮದಡಿಯ ಈ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು. ಸರಕಾರದ ಪರವಾಗಿ ಡಿಸಿಟಿಇ ಆಯುಕ್ತ ಪಿ.ಪ್ರದೀಪ್ ಮತ್ತು ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ (ಶಿಕ್ಷಣ ಮತ್ತು ತರಬೇತಿ) ತಿರುಮಲ ಆರೋಹಿ ಅವರು ಒಪ್ಪಂದ ಪತ್ರಗಳಿಗೆ ಸಹಿ ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶ್ವತ್ಥ ನಾರಾಯಣ, ‘ಈ ಒಪ್ಪಂದವು ಮೂರು ಭಾಗಗಳನ್ನು ಒಳಗೊಂಡಿದೆ. ಮೊದಲಿಗೆ, ಇನ್ಫೋಸಿಸ್ ಕಂಪೆನಿಯು 35 ಕೋಟಿ ರೂ.ವೆಚ್ಚದಲ್ಲಿ ರೂಪಿಸಿರುವ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಯಲ್ಲಿರುವ 3,900ಕ್ಕೂ ಹೆಚ್ಚಿನ ಕೋರ್ಸ್ಗಳು ಮತ್ತು 1.6 ಲಕ್ಷ ಕಲಿಕಾ ಸಂಪನ್ಮೂಲಗಳನ್ನು 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಚಿತವಾಗಿ ಲಭ್ಯವಾಗಿಸಲಿದೆ. ಎರಡನೆಯದಾಗಿ, ಕಂಪೆನಿಯು ಬೋಧಕರ ತರಬೇತಿಯಲ್ಲಿ ಸಹಕರಿಸಲಿದೆ. ಮೂರನೆಯದಾಗಿ, ಕಂಪೆನಿಯು 15 ಸಾವಿರ ಕಂಪ್ಯೂಟರುಗಳನ್ನು ದೇಣಿಗೆ ಕೊಡುವ ಮೂಲಕ ಕಾಲೇಜುಗಳ ಡಿಜಿಟಲ್ ಮೂಲಸೌಕರ್ಯ ಸದೃಢಗೊಳಿಸಲಿದೆ' ಎಂದು ವಿವರಿಸಿದರು.
‘ಈ ಒಪ್ಪಂದವು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಆಶಯದಂತೆ ಸಂಯೋಜಿತ ಕಲಿಕೆಗೆ (ಬ್ಲೆಂಡೆಂಡ್ ಲನಿರ್ಂಗ್) ಮತ್ತು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಪೂರಕವಾಗಿದೆ' ಎಂದ ಅವರು, ‘ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ವೇದಿಕೆಯು ವರ್ಚುಯಲ್ ಪ್ರಯೋಗಾಲಯಗಳು, ಗೇಮಿಫಿಕೇಷನ್ ಮತ್ತಿತರ ಅಂಶಗಳನ್ನು ಒಳಗೊಂಡು ಆಸಕ್ತಿದಾಯಕವಾಗಿದೆ'.
‘ಇದು ಉದ್ಯಮ ಪರಿಣತರೊಂದಿಗೆ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಉದ್ಯಮಕ್ಕೆ ಬೇಕಾದ ಕೌಶಲಗಳು ಹಾಗೂ ವಿದ್ಯಾರ್ಥಿಗಳು ಕೋರ್ಸ್ಗಳಲ್ಲಿ ಕಲಿಯುವ ಕೌಶಲಗಳ ನಡುವಿನ ಕಂದಕವನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿರುವ 1.6 ಲಕ್ಷ ಕಲಿಕಾ ಸಂಪನ್ಮೂಲಗಳು ಆಡಿಯೊ, ವಿಡಿಯೊ, ಆನಿಮೇಷನ್ ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳ ಅರ್ಥಪೂರ್ಣ ಕಲಿಕೆಗೆ ಸಹಕಾರಿಯಾಗಿವೆ' ಎಂದು ಅವರು ಹೇಳಿದರು.
‘ಒಪ್ಪಂದದ ಪ್ರಕಾರ ಬೋಧಕರ ನಿಯಮಿತ ತರಬೇತಿಯಲ್ಲಿ ಇನ್ಫೋಸಿಸ್ ಭಾಗಿಯಾಗಲಿದ್ದು, ಈಗ ಮೊದಲನೇ ತಂಡದ 200 ಬೋಧಕರಿಗೆ ಮೈಸೂರು ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಸದ್ಯದಲ್ಲೇ ತರಬೇತಿ ಆರಂಭವಾಗುತ್ತದೆ. ಸರಕಾರಿ ತಾಂತ್ರಿಕ ಕಾಲೇಜುಗಳಿಗೆ ಒಟ್ಟು 30 ಸಾವಿರ ಕಂಪ್ಯೂಟರ್ಗಳ ಅಗತ್ಯವಿತ್ತು. ಈಗ ಇನ್ಫೋಸಿಸ್ 15 ಸಾವಿರ ಕಂಪ್ಯೂಟರ್ ಗಳನ್ನು ನೀಡುವ ಮೂಲಕ 27ಸಾವಿರ ಕಂಪ್ಯೂಟರ್ಗಳು ಲಭ್ಯವಾದಂತೆ ಆಗಿವೆ. ಇದರಿಂದಾಗಿ ಸರಕಾರಿ ಡಿಪ್ಲೊಮಾ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಶೇ. 90ರಷ್ಟು ಕಂಪ್ಯೂಟರ್ ಅಗತ್ಯ ಪೂರೈಕೆಯಾದಂತೆ ಆಗಿದೆ' ಎಂದು ಅವರು ತಿಳಿಸಿದರು.
‘ಈಗ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಗಾಗಿ 35 ಕೋಟಿ ರೂ.ವೆಚ್ಚ ಮಾಡಿರುವ ಇನ್ಫೋಸಿಸ್, ಮುಂದಿನ 5ರಿಂದ 10 ವರ್ಷಗಳ ಅವಧಿಯಲ್ಲಿ ಇನ್ನೂ 750 ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಪ್ರೋಗ್ರಾಮ್ ಮ್ಯಾನೇಜರ್ ಕಿರಣ್ ಎನ್.ಜಿ. ಮಾತನಾಡಿ, ‘ಈ ಒಡಂಬಡಿಕೆಯೂ ಉನ್ನತ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಇದು ಉತ್ತೇಜನ ನೀಡುತ್ತದೆ. ಜೊತೆಗೆ, ಯುವ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿಯು ಸಕಾರಾತ್ಮಕ ಹೆಜ್ಜೆಯಾಗಿದೆ. ಇನ್ಫೋಸಿಸ್ ಕಂಪೆನಿಯು ತನ್ನ ಸಿಬ್ಬಂದಿಯ ಸಾಮಥ್ರ್ಯ ವೃದ್ಧಿ, ಜಾಗತಿಕ ಗುಣಮಟ್ಟದ ನಿರಂತರ ಕಲಿಕೆ ಹಾಗೂ ಪ್ರತಿಭಾ ವೃದ್ಧಿಗೆ ಮೊದಲಿನಿಂದಲೂ ಒತ್ತು ಕೊಡುತ್ತಾ ಬಂದಿದೆ. ಈಗ ಒಡಂಬಡಿಕೆಯ ಮೂಲಕ ಅದನ್ನು ವಿದ್ಯಾರ್ಥಿಗಳಿಗೂ ವಿಸ್ತರಿಸಲು ಅವಕಾಶವಾಗಿದೆ'ಎಂದರು.
ಇದೇ ವೇಳೆ ಮಾತನಾಡಿದ ಇನ್ಫೋಸಿಸ್ ಸಂಸ್ಥೆಯ ಸಿಇಓ ಪ್ರವೀಣ್ ರಾವ್, ‘ಈ ಒಡಂಬಡಿಕೆಯ ಅನುಷ್ಠಾನದಲ್ಲಿ ಕೈಜೋಡಿಸಿರುವ ರೋಟರಿ ಸಂಸ್ಥೆಯು, ಕಂಪ್ಯೂಟರ್ಗಳನ್ನು ಕಾಲೇಜುಗಳಿಗೆ ತಲುಪಿಸಿ ಅವನ್ನು ಅಳವಡಿಸುವ ಕಾರ್ಯವನ್ನು ಮಾಡಲಿದೆ. ಜೊತೆಗೆ, ಕಂಪ್ಯೂಟರ್ಗಳಿಗೆ ಆಪರೇಟಿಂಗ್ ಸಿಸ್ಟಮ್ (ಕಾರ್ಯಾಚರಣೆ ವ್ಯವಸ್ಥೆ) ಹಾಗೂ ಅಗತ್ಯ ಸಾಫ್ಟ್ವೇರ್ಗಳನ್ನು ಒದಗಿಸಿಕೊಡಲಿದೆ ಎಂದರು.
ಇದೇ ವೇಳೆ, ದೇಣಿಗೆ ಕೊಡಲಾದ 300 ಕಂಪ್ಯೂಟರ್ಗಳನ್ನು ನಗರದ ಕೆ.ಆರ್.ವೃತ್ತದಲ್ಲಿರುವ ಎಸ್.ಜೆ.ಪಾಲಿಟೆಕ್ನಿಕ್ಗೆ ಕೊಂಡೊಯ್ಯಲು ಸಿದ್ಧವಾಗಿದ್ದ ವಾಹನಕ್ಕೆ ಸಚಿವರು ಹಸಿರು ನಿಶಾನೆ ತೋರಿದರು. ರೋಟರಿ ಇಂಡಿಯಾ ಲಿಟರರಿ ಮಿಷನ್ನ ರಾಜೇಂದ್ರ ರಾಯ್, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ನಾಯ್ಕ್, ಡಿಸಿಟಿಇ ಆಯುಕ್ತ ಪ್ರದೀಪ್ ಪಿ., ಡಿಸಿಟಿಯ ನಿರ್ದೇಶಕ ಮಂಜುನಾಥ್ ಆರ್. ಮತ್ತು ಜಂಟಿ ನಿರ್ದೇಶಕ ಶಿವಶಂಕರ್ ನಾಯ್ಕ್ ಎಲ್. ಪಾಲ್ಗೊಂಡಿದ್ದರು.