ಜಿಲ್ಲಾ ಉಸ್ತುವಾರಿ ಬದಲಾವಣೆಗೆ ಸಚಿವ ಮಾಧುಸ್ವಾಮಿ ಅಸಮಾಧಾನ
ತುಮಕೂರು: 'ಚುನಾವಣೆ ಸಮೀಪಿಸುತ್ತಿರುವಾಗ ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಿರುವುದು ಸರಿಯಲ್ಲ' ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಜಿಲ್ಲೆಗಳನ್ನು ಹೊರತುಪಡಿಸಿ ಸಚಿವರಿಗೆ ಇತರೆ ಜಿಲ್ಲೆಗಳಿಗೆ ಉಸ್ತುವಾರಿ ನೀಡಿರುವುದು ಸರಿಯಲ್ಲ. ಪ್ರಮುಖವಾಗಿ ಚುನಾವಣೆ ಹತ್ತಿರ ಇರುವಾಗ ಇಂತಹ ನಿರ್ಧಾರಗಳು ಅನಾವಶ್ಯಕ ಎಂದು ತಿಳಿಸಿದ್ದಾರೆ.
ನನಗೆ ಉಸ್ತುವಾರಿ ತಪ್ಪಿದ್ದರಿಂದ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದ ಅವರು, ತುಮಕೂರು ಜಿಲ್ಲೆ ಕೊಟ್ಟಿದ್ದರೆ ಸಂತೋಷ ಆಗುತ್ತಿತ್ತು. ಇನ್ನು ಏಳೆಂಟು ತಿಂಗಳಲ್ಲಿ ಚುನಾವಣೆ ಪರ್ವ ಪ್ರಾರಂಭವಾಗುತ್ತೆ. ಬೇರೆ ಜಿಲ್ಲೆಗೆ ಹೋಗಿ ನಾವು ಏನೂ ಮಾಡಕಾಗಲ್ಲ ಎಂದು ಹೇಳಿದರು.
ಉಸ್ತುವಾರಿ ಸಚಿವರು ಹತ್ತಿರದಲ್ಲಿರಬೇಕು. ಜಿಲ್ಲಾಡಳಿತದ ಜೊತೆ ವಾರಕ್ಕೆ ಒಂದೆರಡು ಬಾರಿಯಾದರೂ ಸ್ಪಂದಿಸುವ ರೀತಿ ಇರಬೇಕು. ತವರು ಜಿಲ್ಲೆ ಉಸ್ತುವಾರಿ ಕೊಡದೇ ಇರುವುದು ಒಂದು ಹೊಸ ಪ್ರಯೋಗ. ಇದನ್ನು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಮಾಡಿದ್ರು. ಆಗ ಅದು ವಿಫಲ ಆಯ್ತು ಎಂದು ವಿವರಿಸಿದರು.