ಚಿತ್ರದುರ್ಗ; ಟ್ಯಾಂಕರ್ ಗೆ ಹಿಂಬದಿಯಿಂದ ಕಾರು ಢಿಕ್ಕಿ: ಮೂವರು ಸ್ಥಳದಲ್ಲೇ ಮೃತ್ಯು
ಚಿತ್ರದುರ್ಗ : ಟೋಲ್ ನಲ್ಲಿ ಹಣ ಕಟ್ಟಲು ನಿಂತಿದ್ದ ಟ್ಯಾಂಕರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿರಿಯೂರು ತಾಲ್ಲೂಕಿನ ಗುಯಿಲಾಳ್ ಟೋಲ್ ನಲ್ಲಿ ಗುರುವಾರ ನಡೆದಿದೆ.
ಮೃತರನ್ನು ಬೆಳಗಾವಿ ಮೂಲದ ಕಾರು ಚಾಲಕ ರಮೇಶ್ (55), ವಿಶ್ವನಾಥ್ (65) ಹಾಗೂ ಸೀಮಾ(45) ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಹಿರಿಯೂರು ತಾಲ್ಲೂಕಿನ ಗುಯಿಲಾಳ್ ಟೋಲ್ ನಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಹಣ ಕಟ್ಟಲೆಂದು ಟ್ಯಾಂಕರ್ ಚಾಲಕ ತನ್ನ ಟ್ಯಾಂಕರ್ ಲಾರಿಯನ್ನು ನಿಲ್ಲಿಸಿದ್ದು, ಈ ವೇಳೆ ಬೆಳಗಾವಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನ ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಕಾರಿನಲ್ಲಿದ್ದ ರಮೇಶ್, ವಿಶ್ವಾನಾಥ್ ಹಾಗೂ ಸೀಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.