ವರ್ಗಾವಣೆಯಾದರೂ ಜಾಗ ಖಾಲಿ ಮಾಡದ ಇನ್ಸ್ಪೆಕ್ಟರ್ ಗಳು: ಡಿಜಿ-ಐಜಿಪಿ ಕಚೇರಿಯಿಂದ ನೋಟಿಸ್ ಜಾರಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 11: ವರ್ಗಾವಣೆ ಆದೇಶ ಹೊರಡಿಸಿದರೂ, ಪೊಲೀಸ್ ಇಲಾಖೆಯ ಬರೋಬ್ಬರಿ 38 ಇನ್ಸ್ಪೆಕ್ಟರ್ಗಳು ವರ್ಗಾಯಿಸಿದ ಠಾಣೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಡಿಜಿ-ಐಜಿಪಿ ಕಚೇರಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.
ಸಂಬಂಧಿಸಿದ ಘಟಕಾಧಿಕಾರಿಗಳು ನಿಮ್ಮನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ. ಆದರೆ ನೀವು ವರ್ಗಾವಣೆಗೊಂಡಿರುವ ಸ್ಥಳದಲ್ಲಿ ಇದುವರೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಈ ಮೂಲಕ ಬೇಜವಾಬ್ದಾರಿ, ಉದ್ಧಟತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ಕಂಡುಬಂದಿದ್ದು, ಈ ಸಂಬಂಧ ಕೂಡಲೇ ನೀವು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಂತಿಮವಾಗಿ ಸೂಚಿಸಲಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಏಳು ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದ್ದು, ಒಂದು ವೇಳೆ ನೀವು ಕರ್ತವ್ಯಕ್ಕೆ ವರದಿ ಮಾಡಕೊಳ್ಳದೇ ಇಲ್ಲವಾದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮ್ಮಿಂದಾದ ತಪ್ಪಿನ ಬಗ್ಗೆ ವಿವರಣೆ ಸಲ್ಲಿಸಲು ಈ ಅವಕಾಶ ನೀಡಲಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.